ಕುಷ್ಟಗಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಹೆರಿಗೆ ವೈದ್ಯೆ ನಿರ್ಲಕ್ಷದಿಂದ ಶಿಶು ಸಾವನ್ನಪ್ಪಿದ್ದು, ಆ ವೈದ್ಯರನ್ನು ಅಮಾನತುಗೊಳಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಶಿಶುವಿನ ಕುಟುಂಬಸ್ಥರು, ಗ್ರಾಮಸ್ಥರು, ದಲಿಪರ ಸಂಘಟನೆಯ ಸದಸ್ಯರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.ತಾಲೂಕಿನ ಲಿಂಗದಳ್ಳಿ ಗ್ರಾಮದ ಹನುಮಂತಿ ಮಾದರ ಎಂಬವರಿಗೆ ಮಂಗಳವಾರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ಸಮಯದಲ್ಲಿ ವೈದ್ಯೆ ಡಾ.ಚಂದ್ರಕಲಾ ಸಾಮಾನ್ಯ ಡೆಲಿವರಿ ಆಗುವುದಿಲ್ಲ. ಸಿಜೇರಿಯನ್ ಮಾಡಿ ಡೆಲಿವರಿ ಮಾಡಬೇಕೆಂದು ಕುಟುಂಬದ ಸದಸ್ಯರ ಸಹಿ ಪಡೆದಿದ್ದರು. ಬಳಿಕ ಚಿಕಿತ್ಸೆ ಮಾಡದೇ ಮುಂದೂಡುವ ಮೂಲಕ ಕಾಲಹರಣ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿಜೇರಿಯನ್ ಮಾಡಿದಾಗ ಹೊಟ್ಟೆಯಲ್ಲಿ ಮಗು ಮೃತಪಟ್ಟಿದ್ದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ದಲಿತ ಪರ ಸಂಘಟನೆಯ ಸದಸ್ಯರು ಬುಧವಾರ ರಾತ್ರಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಮಂಗಳವಾರ ಸಿಜೇರಿಯನ್ ಮಾಡಿದ್ದರೆ ಮಗು ಬದುಕುಳಿಯುವ ಸಾಧ್ಯತೆ ಇತ್ತು. ವೈದ್ಯೆಯ ಕೆಲಸದ ವಿಳಂಬದಿಂದಾಗಿ ಹಾಗೂ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ. ಈ ವೈದ್ಯೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಮನವೊಲಿಕೆಗೆ ಯತ್ನ: ತಕ್ಷಣವೇ ವೈದ್ಯೆಯನ್ನು ಅಮಾನತು ಮಾಡಲು ಸಾಧ್ಯವಾಗುವುದಿಲ್ಲ. ಘಟನೆಯನ್ನು ಪರಿಶೀಲಿಸಿ ತನಿಖೆ ನಡೆಸಬೇಕಾಗುತ್ತದೆ. ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ ಆಸ್ಪತ್ರೆಯ ಇತರೆ ವೈದ್ಯಾಧಿಕಾರಿಗಳು ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರತಿಭಟನಾಕಾರರು ಒಪ್ಪಲಿಲ್ಲ.
ನಂತರ ವಿಡಿಯೋ ಕರೆ ಮಾಡುವ ಮೂಲಕ ಪ್ರತಿಭಟನಾಕಾರರನ್ನು ಸಂಪರ್ಕಿಸಿದ ಡಿಎಚ್ಒ ಡಾ.ಲಿಂಗರಾಜು ಟಿ., ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನಾಕಾರರು ತಾಲೂಕು ಆರೋಗ್ಯ ಅಧಿಕಾರಿ ಆನಂದ ಗೊಟೂರು ಅವರಿಗೆ ಮನವಿ ಸಲ್ಲಿಸಿದರು.ವೈದ್ಯಾಧಿಕಾರಿ ಕೆ.ಎಸ್. ರೆಡ್ಡಿ, ಪಿಎಸ್‌ಐ ಮುದ್ದು ರಂಗಸ್ವಾಮಿ, ಸಿಪಿಐ ಯಶವಂತ ಬಿಸನಹಳ್ಳಿ ಇದ್ದರು.ಆಸ್ಪತ್ರೆಯಲ್ಲಿ ಬಾಣಂತಿ ಆರೋಗ್ಯವಾಗಿದ್ದಾರೆ. ಆಕೆಯ ಸಂಬಂಧಿಕರು ಬುಧವಾರ ರಾತ್ರಿ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ನಾಳೆ, ನಾಡಿದ್ದು ಆಸ್ಪತ್ರೆಗೆ ಅಧಿಕಾರಿಗಳು ಬಂದು ತನಿಖೆ ನಡೆಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎನ್ನುತ್ತಾರೆ ಕುಷ್ಟಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೊಟೂರು.