ಕರ್ತವ್ಯಕ್ಕೆ ಅಡ್ಡಿ; ಸುಳ್ಳು ಪ್ರಕರಣ ಖುಲಾಸೆ- ವಿನಯ್‌ ಕುಮಾರ್

KannadaprabhaNewsNetwork | Published : May 13, 2025 1:03 AM
Follow Us

ಸಾರಾಂಶ

ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪಿಎಸ್ಐ ಪ್ರಸಾದ್ ನನ್ನ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದ ಪ್ರಕರಣವನ್ನು ಜಗಳೂರು ಜೆಎಂಎಫ್‌ಸಿ ನ್ಯಾಯಾಲಯ ಖುಲಾಸೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಬಿ.ವಿ. ವಿನಯ ಕುಮಾರ್ ಹೇಳಿದ್ದಾರೆ.

- ಭರಮಸಾಗರದ ಸಿಪಿಐ ಪ್ರಸಾದ್ ವಜಾಗೊಳಿಸಿ, ಕಾನೂನು ಕ್ರಮಕ್ಕೆ ಒತ್ತಾಯ

- - -

ಕನ್ನಡಪ್ರಭ ವಾರ್ತೆ ಜಗಳೂರು

ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪಿಎಸ್ಐ ಪ್ರಸಾದ್ ನನ್ನ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದ ಪ್ರಕರಣವನ್ನು ಜಗಳೂರು ಜೆಎಂಎಫ್‌ಸಿ ನ್ಯಾಯಾಲಯ ಖುಲಾಸೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಬಿ.ವಿ. ವಿನಯ ಕುಮಾರ್ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೬ರಲ್ಲಿ ಜಗಳೂರು ಠಾಣೆ ಪಿಎಸ್ಐ ಆಗಿದ್ದ ಪ್ರಸಾದ್ ತಿಂಗಳ ವಂತಿಕೆ ಪಡೆದು ಪೊಲೀಸ್ ರಕ್ಷಣೆಯಲ್ಲಿ ಅಕ್ರಮ ಮರಳು ಸಾಗಾಣಿಗೆ ಸಹಕರಿಸುತ್ತಿದ್ದ ಕುರಿತು ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಲಾಗಿತ್ತು. ಇದರಿಂದ ವೈಯಕ್ತಿಕ ದ್ವೇಷದಿಂದ ನನ್ನ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿದ್ದರು. ಅಲ್ಲದೇ, ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದರು ಎಂದರು.

ಈ ಎಲ್ಲ ಕಾರಣದಿಂದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ೨೦೧೬ರಲ್ಲಿ ಪ್ರಸಾದ್ ವಿರುದ್ಧ ದೂರು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಆಯೋಗವು ಆರೋಪಿತ ಪಿಎಸ್ಐ ಪ್ರಸಾದ್, ಸಿಬ್ಬಂದಿ ಪಕ್ಷಣ್ಣ, ಗೋವಿಂದ್ ರಾಜ್, ಲಿಂಗೇಶ್, ಷಂಷುದ್ದೀನ್, ಶ್ರೀಧರ್ ಅವರಿಗೆ ದಂಡವಿಧಿಸಿ ದೂರದಾರ ಬಿ.ವಿ. ವಿನಯ ಕುಮಾರ್ ಆದ ನನ್ನ ಖಾತೆಗೆ ೨೦೧೯ ಡಿ.೨೧ರಂದು ಎಸ್‌ಪಿ ಖಜಾನೆಯಿಂದ ಸುಮಾರು ₹೬೦ ಸಾವಿರ ಪರಿಹಾರದ ಹಣ ಜಮೆಯಾಗಿದೆ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ೮.೨ ವರ್ಷಗಳಿಂದ ಕಾನೂನು ಹೋರಾಟ ನಡೆಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಚೇತನ್ ಅವರು ಕೇಸನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿಸಿದರು. ಆದ್ದರಿಂದ ಈಗ ಭರಮಸಾಗರದ ಪೊಲೀಸ್ ಠಾಣೆಯಲ್ಲಿ ವೃತ್ತ ಆರಕ್ಷಕ ನಿರೀಕ್ಷರಾಗಿರುವ ಪ್ರಸಾದ್ ಅವರನ್ನು ಕರ್ತವ್ಯವದಿಂದ ವಜಾಗೊಳಿಸಬೇಕು. ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಜಗಳೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೈಕೋರ್ಟಿನಲ್ಲೂ 2 ರಿಟ್ ಪಿಟಿಷನ್ ಪ್ರಕರಣ ದಾಖಲಾಗಿ, ಪ್ರಸಾದ್ ವಿರುದ್ಧ ನೋಟಿಸ್ ಜಾರಿಯಾಗಿದೆ ಎಂದು ಮಾಹಿತಿ ನೀಡಿದರು.

ಪಪಂ ಸದಸ್ಯ ರಮೇಶ್ ರೆಡ್ಡಿ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ವಿರುದ್ಧ ಹೋರಾಟ ನಡೆಸಿದ ವಿನಯ ಕುಮಾರ್ ಅವರನ್ನು ಸುಳ್ಳು ಪ್ರಕರಣ ದಾಖಲಿಸಿ ಪಿಎಸ್ಐ ಪ್ರಸಾದ್ ಯುವಕನ ಭವಿಷ್ಯ ಹಾಳು ಮಾಡಿದ್ದಾರೆ. ಇದೀಗ ಉತ್ತಮ ವ್ಯಾಸಂಗ ಮಾಡಿದ್ದರೂ, ಉದ್ಯೋಗ ಸಿಗುತ್ತಿಲ್ಲ. ಇಂಥವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉದ್ದಗಟ್ಟ ಲಕ್ಷ್ಮಣ್, ಕಮಂಡಲಗೊಂದಿ ವೆಂಕಟೇಶ್, ಸ್ವಾಮಿ ಮತ್ತಿತರಿದ್ದರು.

- - -

-12 ಜೆ,ಜಿ.ಎಲ್2: ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸಾಮಾಜಿಕ ಕಾರ್ಯಕರ್ತ ಬಿ.ವಿ ವಿನಉ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.