ಕನ್ನಡಪ್ರಭ ವಾರ್ತೆ ಬೆಂಗಳೂರು:
ವಿಷ್ಣುವರ್ಧನ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ನಗರದ ನಂದಿ ಲಿಂಕ್ಸ್ ಮೈದಾನದಲ್ಲಿ ವಿಷ್ಣು ಸೇನಾ ಸಮಿತಿಯಿಂದ ಆಯೋಜಿಸಿದ್ದ ‘ವಿಷ್ಣುವರ್ಧನ ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಎಲ್ಲೇ ಇದ್ದರೂ ವಿಷ್ಣುವರ್ಧನ್ ಅವರ ನೆನಪುಗಳು ನಮ್ಮೊಂದಿಗೆ ಸದಾ ಇರುತ್ತವೆ. ಅವರು ಕಲಾವಿದರು, ಕೆಲಸಗಾರರ ಬಗ್ಗೆ ಬಹಳ ಕಾಳಜಿ ತೋರುತ್ತಿದ್ದರು. ಅವರ 200 ಪಾತ್ರಗಳು, ಚಿತ್ರಗಳು ನಮ್ಮೆಲ್ಲರ ನೆನಪಿನಲ್ಲಿರುತ್ತವೆ ಎಂದರು.
ಸಾವಿರ ಜನರ ನಡುವೆ ವಿಷ್ಣು ಬರುತ್ತಿದ್ದರೆ ಅವರೇ ಎಂದು ಗೊತ್ತಾಗುತ್ತಿತ್ತು. ಏಕೆಂದರೆ, ಅವರ ನಡಿಗೆ ಶೈಲಿ, ಹಾವ ಭಾವ ಎಲ್ಲವೂ ಭಿನ್ನವಾಗಿತ್ತು. ಅವರ ಭಾಷೆ, ಮಾತನಾಡಿಸುವ ಶೈಲಿ, ಗೌರವ ಗುಣಗಳು ವಿಶೇಷ ಎನಿಸುತ್ತವೆ. ಅವರಲ್ಲಿನ ಸಭ್ಯತೆ, ಶಿಸ್ತು, ಸಮರ್ಪಣೆ ಮನೋಭಾವ ಗುಣಗಳನ್ನು ನಾವು ಕಲಿಯಬೇಕು. ಆರೂವರೆ ಕೋಟಿ ಜನರನ್ನು ಒಂದು ಗೂಡಿಸುವ ಶಕ್ತಿ ನಟ ವಿಷ್ಣುವರ್ಧನ ಎಂದು ಹೇಳಿದರು.ರಾಮಚಾರಿ ನನಗೆ ಅಣ್ಣನಂತಿದ್ದರು:
ನಟ ಶಿವರಾಜಕುಮಾರ್ ಮಾತನಾಡಿ, ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ವಿಷ್ಣು ಅವರ ಜೊತೆ ಕೈಹಿಡಿದುಕೊಂಡು ಓಡಾಡಿದ್ದೆ. ಅವರು ದೈಹಿಕವಾಗಿ ಇಲ್ಲಿಂದ ಹೋಗಿರಬಹುದು. ಆದರೆ, ನಮ್ಮೊಂದಿಗೆ ಇಲ್ಲೇ ಇದ್ದಾರೆ. ಅಪ್ಪಾಜಿ ಬಿಟ್ಟರೆ ನನಗೆ ಬಹಳ ಇಷ್ಟದ ನಟ ಎಂದರೆ ವಿಷ್ಣುವರ್ಧನ್. ಹ್ಯಾಂಡ್‌ಸಮ್ ನಟ ಎಂದು ವಿಷ್ಣು ಜೊತೆಗೆ ಕಳೆದ ದಿನಗಳನ್ನು ಸ್ಮರಿಸಿದರು.
ಅಮೃತ ಮಹೋತ್ಸವ ಅಂಗವಾಗಿ 500 ಮೀಟರ್ ಉದ್ದದ ಕನ್ನಡ ಭಾವುಟವನ್ನು ಅಭಿಮಾನಿಗಳು ಮೆರವಣಿಗೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತಂದರು. ವಿಷ್ಣುವರ್ಧನ್ ಅವರ ಅಪರೂಪದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೂ ಕನ್ನಡ ಚಿತ್ರರಂಗದ ಅನೇಕ ಗಾಯಕರು, ಕಲಾವಿದರಿಂದ ಚಿತ್ರಗೀತೆಗಳ ಗಾಯನ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಿದವು. ರಾಜಕೀಯ ಸೇರುವ ಬಗ್ಗೆ ವಿಷ್ಣುಗೆ ಇತ್ತು ಗೊಂದಲ!:ನಟ ವಿಷ್ಣುವರ್ಧನ ಅವರ ರಾಜಕೀಯ ಮತ್ತಿತರ ಕ್ಷೇತ್ರಗಳ ಕುರಿತಾದ ಆಸಕ್ತಿಗಳು, ಕನ್ನಡ ಪ್ರೇಮ, ಚಿತ್ರಗಳ ಮೂಲಕ ನೀಡಿದ ಸಂದೇಶಗಳ ಕುರಿತು ‘ವಿಷ್ಣುವರ್ಧನ ಅಮೃತ ಮಹೋತ್ಸವ’ದಲ್ಲಿ ಕನ್ನಡ ದಿನಪತ್ರಿಕೆಗಳ ಸಂಪಾದಕರು ಭಾಗವಹಿಸಿ ನಟನ ಜೊತೆಗಿನ ಒಡನಾಟಗಳನ್ನು ಹಂಚಿಕೊಂಡರು.ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ವಿಷ್ಣುವರ್ಧನ್ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇತ್ತು. ಸ್ನೇಹಿತ ಅಂಬರೀಷ್ ಸೇರಿ ತಮ್ಮ ಆಪ್ತರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದರು. ಆದರೆ, ಅವರಿಗೆ ರಾಜಕೀಯ ಪ್ರವೇಶದ ಬಗ್ಗೆ ಗೊಂದಲವಿತ್ತು. ರಾಜಕೀಯ ಪ್ರವೇಶಿಸಿದರೆ ಸಿನಿಮಾ ಮತ್ತು ಅಭಿಮಾನಿಗಳನ್ನು ಕಳೆದುಕೊಳ್ಳಬೇಕಾಗುವುದೇನೋ ಎನ್ನುವ ಅಳುಕು ಇತ್ತು ಎಂದರು.
ಸಾಮಾನ್ಯವಾಗಿ ರಾಜಕೀಯದಲ್ಲಿ ಒಳ್ಳೆಯ ಜನರಿಗೆ ಯಶಸ್ಸು ದಕ್ಕುವುದಿಲ್ಲ. ಏಕೆಂದರೆ, ಇಷ್ಟವಿಲ್ಲದ, ಬೇಡದ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಒಂದು ವೇಳೆ ವಿಷ್ಣುವರ್ಧನ್ ರಾಜಕೀಯ ಪ್ರವೇಶಿಸಿದ್ದರೆ ಯಶಸ್ಸು ಕಷ್ಟವಾಗಿರುತ್ತಿತ್ತು. ಆದರೆ, ಅವರ ಸಮಕಾಲೀನರು ಸಂಸದ, ಶಾಸಕರಾಗಿದ್ದರು ಎಂದು ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು.ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್ ಮಾತನಾಡಿ, ವಿಷ್ಣುವರ್ಧನ ಅವರು ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ನಮ್ಮಿಂದ ಮರೆಯಾದ ನಂತರವೂ ಅಪಾರ ಅಭಿಮಾನಿ ಬಳಗವನ್ನು ಉಳಿಸಿಕೊಂಡಿದ್ದಾರೆ. ಅನೇಕ ವರ್ಷಗಳ ನಂತರವೂ 20,000 ಜನ ಸೇರಿ 75ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದರೆ ಸಾಮಾನ್ಯ ಸಂಗತಿಯಲ್ಲ. ಒಬ್ಬ ನಟ ಜನ ಮಾನಸದಲ್ಲಿ ಹೇಗೆ ಉಳಿದುಕೊಂಡಿದ್ದಾನೆ ಎನ್ನುವುದಕ್ಕೆ ಇಲ್ಲಿ ಸೇರಿರುವ ಅಪಾರ ಅಭಿಮಾನಗಳೇ ಸಾಕ್ಷಿ ಎಂದರು.