ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ: ಇನ್‌ಸ್ಪೆಕ್ಟರ್‌ಗೆ ಕೋರ್ಟ್‌ ಎಚ್ಚರಿಕೆ

KannadaprabhaNewsNetwork |  
Published : Sep 28, 2026, 01:30 AM IST
ಹೈಕೋರ್ಟ್‌ | Kannada Prabha

ಸಾರಾಂಶ

ನ್ಯಾಯಾಲಯ ನೂರಾರು ಬಾರಿ ಆದೇಶಿಸಿದ್ದರೂ ಮತ್ತು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಪೊಲೀಸರು ಸಿವಿಲ್‌ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಮಾಡುವುದು ಮುಂದುವರೆಯುತ್ತಿದ್ದು, ಪೊಲೀಸ್‌ ಇಲಾಖೆ ಹೈಕೋರ್ಟ್‌ನಿಂದ ಪದೇ ಪದೆ ಛೀಮಾರಿ ಹಾಕಿಸಿಕೊಳ್ಳುವುದು ಮಾತ್ರ ನಿಂತಿಲ್ಲ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು:

ನ್ಯಾಯಾಲಯ ನೂರಾರು ಬಾರಿ ಆದೇಶಿಸಿದ್ದರೂ ಮತ್ತು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಪೊಲೀಸರು ಸಿವಿಲ್‌ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಮಾಡುವುದು ಮುಂದುವರೆಯುತ್ತಿದ್ದು, ಪೊಲೀಸ್‌ ಇಲಾಖೆ ಹೈಕೋರ್ಟ್‌ನಿಂದ ಪದೇ ಪದೆ ಛೀಮಾರಿ ಹಾಕಿಸಿಕೊಳ್ಳುವುದು ಮಾತ್ರ ನಿಂತಿಲ್ಲ.

ಇದಕ್ಕೆ ತಾಜಾ ಉದಾಹರಣೆಯಾಗಿ ವಾಣಿಜ್ಯ ಕಟ್ಟಡವೊಂದರಲ್ಲಿ ವಿದ್ಯುತ್‌ ಕಾಮಗಾರಿ ಪೂರೈಸಿದ್ದರೂ ಒಪ್ಪಂದಂತೆ 60 ಲಕ್ಷ ರು. ಪಾವತಿಸಿಲ್ಲ ಎಂದು ಗುತ್ತಿಗೆದಾರ ನೀಡಿದ್ದ ದೂರು ಆಧರಿಸಿ ಖ್ಯಾತ ಬೆಂಗಳೂರಿನ ಝೈಟ್ ಇಂಟೀರಿಯರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಖಾಸಗಿ ಕಂಪನಿಯ ನಿರ್ದೇಶಕರು ಮತ್ತು ಉದ್ಯೋಗಿಗಳ ಬ್ಯಾಂಕ್‌ ಖಾತೆ ಫ್ರೀಜ್‌ (ಸ್ಥಗಿತ) ಮಾಡಿಸಿರುವ ಮಂಗಳೂರಿನ ಉಲ್ಲಾಳ ಪೊಲೀಸ್‌ ಠಾಣೆ ತನಿಖಾಧಿಕಾರಿ ವಿರುದ್ಧ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಹೈಕೋರ್ಟ್‌ ತಾಕೀತು ಮಾಡಿರುವ ಪ್ರಕರಣ.

ಪ್ರಕರಣದ ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರನ್ನು ಸೇವೆಯಿಂದ ಅಮಾನತುಪಡಿಸಲು ತೀರ್ಮಾನಿಸಿ, ಆದೇಶ ಬರೆಯಿಸಲು ಮುಂದಾಗಿದ್ದ ಹೈಕೋರ್ಟ್‌, ನಂತರ ರಾಜ್ಯ ಸರ್ಕಾರಿ ಅಭಿಯೋಜಕರು ಮತ್ತು ಮಂಗಳೂರು ನಗರ ಪೊಲೀಸ್‌ ಆಯುಕ್ತರ ಭರವಸೆಯಿಂದ ಆ ನಿರ್ಧಾರದಿಂದ ಹಿಂದೆ ಸರಿಯಿತು.

ಅಮಾನತು ಆದೇಶ ಮಾಡಲೇ?:

ಇದೇ ವೇಳೆ ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರಿಗೆ ಛೀಮಾರಿ ಹಾಕಿದ ಹೈಕೋರ್ಟ್‌, 28 ವರ್ಷ ಸೇವೆ ಸಲ್ಲಿಸಿದ್ದೀರಿ ಎಂದು ಕಂಪನಿಯ ಬ್ಯಾಂಕ್‌ ಖಾತೆ ನಿರ್ಬಂಧಿಸಿದ್ದೀರಿ. ಈ ನ್ಯಾಯಾಲಯ ಅಮಾನತು ಆದೇಶ ಮಾಡಿದರೆ, ನಿಮ್ಮ ಪೊಲೀಸ್‌ ಸಮವಸ್ತ್ರ್ರವೇ ಇರುವುದಿಲ್ಲ. ಉಳಿದ ಸೇವಾ ಅವಧಿಯನ್ನು ಸರ್ವೀಸ್‌ ಮ್ಯಾಟರ್‌ ಮುಂದಿಟ್ಟುಕೊಂಡು ಕೋರ್ಟ್‌ಗೆ ಸುತ್ತಾಡುತ್ತಾ ಮುಗಿಸಬೇಕಾಗುತ್ತದೆ. ಸಮವಸ್ತ್ರ ಇಲ್ಲವಾದರೆ ಏನಾಗುತ್ತದೆ ಗೊತ್ತಲ್ಲ. ನೀವೇ ಹಾಲು-ಬಿಸ್ಕೆಟ್‌ ಹಾಕಿ ಪೋಷಿಸಿದ ನಿಮ್ಮ ಮನೆಯ ನಾಯಿ ಸಹ ನಿಮ್ಮನ್ನು ಮೂಸುವುದಿಲ್ಲ. ಮನೆ ಹತ್ತಿರ ಹೋದರೆ ನಾಯಿ, ನಿಮ್ಮನ್ನು ನೋಡಿ ಬೊಗಳುತ್ತದೆ. ಅಮಾನತು ಮಾಡಿ, ನಿಮ್ಮ ತಲೆ ಹಾಗೂ ಭುಜಕೀರ್ತಿಯನ್ನು (ಪೊಲೀಸ್‌ ಕ್ಯಾಪ್‌, ಯೂನಿಫಾರಂ ಮೇಲಿನ ಸ್ಟಾರ್‌) ಇಳಿಸಲೇ ಎಂದು ಚಾಟಿ ಬೀಸಿತು.

ಎಲೆಕ್ಟ್ರಿಕಲ್‌ ಗುತ್ತಿಗೆದಾರರ ದೂರು ಆಧರಿಸಿ ಮಂಗಳೂರಿನ ಉಲ್ಲಾಳ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಕಂಪನಿ ಮತ್ತು ಅದರ ಹಲವು ನಿರ್ದೇಶಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ನಿರ್ದೇಶನ ನೀಡಿ, ವಿಚಾರಣೆಯನ್ನು ಅ.14ಕ್ಕೆ ಮುಂದೂಡಿತು.

ಸತ್ಯಾಂಶ ಮರೆಮಾಚಿ ದೂರು:

ವಿಚಾರಣೆ ವೇಳೆ ಕಂಪನಿ ಪರ ವಕೀಲ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಎಲೆಕ್ಟ್ರಿಕಲ್‌ ಉಪಕರಣ ಖರೀದಿ ಮತ್ತು ಕೆಲಸದ ಸರ್ವೀಸ್‌ ಚಾರ್ಜ್‌ ಆಗಿ ಕಂಪನಿ ತನಗೆ ನೀಡಬೇಕಿರುವ 60,39,046 ರು. ಪಾವತಿಸಿಲ್ಲ ಎಂದು ಎಲೆಕ್ಟ್ರಿಕಲ್‌ ಗುತ್ತಿಗೆದಾರ ಸುನೀಲ್‌ ಕುಮಾರ್‌ ಪೈಸ್‌ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ. ಒಪ್ಪಂದದಂತೆ 50,11,983 ರು. ಅನ್ನು ಕಂಪನಿ ಈಗಾಗಲೇ ಪಾವತಿಸಿದೆ. ಈ ಸತ್ಯಾಂಶ ಮರೆಮಾಡಿ ಗುತ್ತಿಗೆದಾರ ದೂರು ನೀಡಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.

ಇನ್ನೂ ಯಾವುದೇ ವಿವಾದ ಉಂಟಾದರೆ, ಸಿವಿಲ್‌ ಕೋರ್ಟ್‌ ಮೊರೆ ಹೋಗಿ ಅಥವಾ ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕೆಂದು ಒಪ್ಪಂದದಲ್ಲೇ ಉಲ್ಲೇಖಿಸಲಾಗಿದೆ. ಇದು ಸಂಪೂರ್ಣವಾಗಿ ಸಿವಿಲ್‌ ಪ್ರಕರಣವಾಗಿದ್ದರೂ ತನಿಖಾಧಿಕಾರಿ, ಕಂಪನಿಯ ಎಲ್ಲ ನಿರ್ದೇಶಕರ ಮತ್ತು ಉದ್ಯೋಗಿಗಳ ಬ್ಯಾಂಕ್ ಖಾತೆ ನಿರ್ಬಂಧ (ಫ್ರೀಜಿಂಗ್‌) ಮಾಡಿಸಿದ್ದಾರೆ. ಈ ತೀವ್ರತರವಾದ ಕ್ರಮದಿಂದ ಕಂಪನಿ ತನ್ನ ಉದ್ಯೋಗಿಗಳಿಗೆ ವೇತನ ಪಾವತಿಸಲಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ತನಿಖಾಧಿಕಾರಿ ವಿರೂಪಾಕ್ಷಯ್ಯ ಖುದ್ದಾಗಿ, ಮಂಗಳೂರು ನಗರ ಪೊಲೀಸ್‌ ಆಯುಕ್ತರು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಇದು ಸಂಪೂರ್ಣ ಸಿವಿಲ್‌ ವ್ಯಾಜ್ಯ ಪ್ರಕರಣ. ಸಿವಿಲ್‌ ವ್ಯಾಜ್ಯದಲ್ಲಿ ಪೊಲೀಸ್ ಹಸ್ತಕ್ಷೇಪ ಮಾಡುವ ಅಧಿಕಾರ ಪೊಲೀಸರಿಗೆ ಎಲ್ಲಿದೆ? ಪೊಲೀಸರೆಂದರೆ ಸಿವಿಲ್‌ ಕೋರ್ಟೇ? ಬ್ಯಾಂಕ್‌ ಖಾತೆ ಫ್ರೀಜ್‌ ಮಾಡಿಸುವ ದೊಡ್ಡ ಕ್ರಮ ಏಕೆ ಜರುಗಿಸಿದ್ದೀರಿ? ಪೊಲೀಸರು ಸಿಕ್ಕಾಪಟ್ಟೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದು ಪೊಲೀಸ್‌ ರಾಜ್ಯವೇ? ಸಿವಿಲ್‌ ವ್ಯಾಜ್ಯದ ಬಗ್ಗೆ ಯಾರಾದರೂ ದೂರು ನೀಡಿದರೆ, ಸಿವಿಲ್‌ ಕೋರ್ಟ್‌ಗೆ ಹೋಗಲು ಸೂಚಿಸಬೇಕು. ಸಮವಸ್ತ್ರ ಹಾಕಿಕೊಂಡು ವಸೂಲಿಗೆ ಇಳಿದಿದ್ದೀರಾ? ಪೊಲೀಸರು ನಿಮ್ಮ ಪವರ್‌ ತೋರಿಸಿದರೆ, ಕೋರ್ಟ್‌ ಪವರ್‌ ನಾನು ತೋರಿಸಲೇ? ಈ ಕೂಡಲೇ ಮಂಗಳೂರು ಪೊಲೀಸ್‌ ಆಯುಕ್ತರು ಮತ್ತು ತನಿಖಾಧಿಕಾರಿಯನ್ನು ಅಮಾನತುಪಡಿಸಲು ಸರ್ಕಾರಕ್ಕೆ ಆದೇಶಿಸಲೇ ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು, ಬಡವರ ಸೇವೆಗೆ ಸಹಕಾರ ಸಂಘ ಬದ್ಧ: ಯುವರಾಜ್
ಪೋಷಣ್ ಅಭಿಯಾನ ದೇಶದ ಪ್ರಗತಿ ಪ್ರತಿಬಿಂಬಿ: ನ್ಯಾ. ಹೇಮಂತ್ ಕುಮಾರ್