ನ. ೧೬: ಪಲಿಮಾರಿನಲ್ಲಿ ಕಾಪು ತಾಲೂಕು ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Oct 6, 2024 1:29 AM

ಸಾರಾಂಶ

ಪಾಂಗಾಳ ಬಾಬು ಕೊರಗ ಅವರು, ಕೊರಗ ಸಮುದಾಯದ ಆದಿಬುಡ ಮೂಲ ಅಸ್ಮಿತೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸಿದ ಗಟ್ಟಿಧ್ವನಿಯಾಗಿದ್ದಾರೆ. ಅವರು ೧೯೮೮ರಿಂದ ನಿರಂತರವಾಗಿ ಕೊರಗ ಸಮುದಾಯದ ಸಂಘಟನೆಯೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.

ಸರ್ವಾಧ್ಯಕ್ಷರಾಗಿ ಭಾಷಾತಜ್ಞ ಪಾಂಗಾಳ ಬಾಬು ಕೊರಗ ಆಯ್ಕೆಕನ್ನಡಪ್ರಭ ವಾರ್ತೆ ಕಾಪು

ಕೊರಗ ಸಮುದಾಯದ ಹಿರಿಯ ಸಂಘಟಕ ಹಾಗೂ ಕೊರಗ ಭಾಷಾ ತಜ್ಞ, ಸಾಹಿತಿ, ಸಂಶೋಧಕ ಪಾಂಗಾಳ ಬಾಬು ಕೊರಗ ಅವರನ್ನು ನ.೧೬ರಂದು ಪಲಿಮಾರು ಸರ್ಕಾರಿ ಪಪೂ ಕಾಲೇಜಿನಲ್ಲಿ ನಡೆಯುವ ‘೬ನೇ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಪು ಘಟಕ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪಾಂಗಾಳ ಬಾಬು ಕೊರಗ ಅವರು, ಕೊರಗ ಸಮುದಾಯದ ಆದಿಬುಡ ಮೂಲ ಅಸ್ಮಿತೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸಿದ ಗಟ್ಟಿಧ್ವನಿಯಾಗಿದ್ದಾರೆ. ಅವರು ೧೯೮೮ರಿಂದ ನಿರಂತರವಾಗಿ ಕೊರಗ ಸಮುದಾಯದ ಸಂಘಟನೆಯೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ‘ದೆಹಲಿ ದರ್ಶನ’ ಕಾರ್ಯಕ್ರಮದಲ್ಲಿ ತಂಡದೊಂದಿಗೆ ಭಾಗವಹಿಸಿದ್ದಾರೆ. ದೆಹಲಿಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಕೊರಗ ಸಮುದಾಯದ ಬಗ್ಗೆ ವಿಚಾರಮಂಡನೆ ಮಾಡಿದ್ದಾರೆ. ಚೆನ್ನೈನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಇಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಅವರು ಪಾಲ್ಗೊಂಡು, ‘ತಿರುಕ್ಕುರಳ್’ ಗ್ರಂಥವನ್ನು ಕೊರಗ ಭಾಷೆಗೆ ಅನುವಾದಿಸಿದ್ದನ್ನು ಪ್ರಸ್ತುತಪಡಿಸಿದ್ದಲ್ಲದೆ, ‘ದಕ್ಷಿಣ ಭಾರತದ ಭಾಷೆಗಳ ನಡುವೆ ಕೊರಗ ಭಾಷೆಯ ಅಳಿವು-ಉಳಿವು’ ಬಗ್ಗೆ ವಿಚಾರಗಳನ್ನು ದಾಖಲಿಸಿದ್ದಾರೆ. ೯೦ ಭಾಷೆಗಳಲ್ಲಿ ‘ತಿರುಕ್ಕುರಳ್’ ಗ್ರಂಥ ಅನುವಾದಗೊಂಡಿದ್ದು, ಇದರಲ್ಲಿ ಕೊರಗ ಭಾಷೆಯೂ ಒಳಗೊಳ್ಳುವಂತೆ ಮಾಡಿದ್ದು ಕೊರಗ ಭಾಷಾ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.ಪ್ರಸ್ತುತ ತುಳು ಅಕಾಡೆಮಿಯ ಸದಸ್ಯರಾಗಿರುವ ಅವರು, ಕಾಪು ತಾಲೂಕು ಬೆಳ್ಳೆ ಗ್ರಾಮದ ಪಾಂಬೂರಿನ ಮುಂಚಿಕಾಡು ಕೊರಗರ ಬಲೆಪಿನಲ್ಲಿ ‘ನವೋದಯ ಕಲಾತಂಡ’ವನ್ನು ಸ್ಥಾಪಿಸಿ, ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದಾರೆ. ಅವರ ಬರೆಹಗಳು ಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ‘ಕೊರಗರ ಅಜಲು, ಕೊರಗರ ಭಾಷೆ, ಆದಿಬುಡಮೂಲ ಕೊರಗರು, ಚೋಮನ ಕರಂಡೆ (ಅನುವಾದ), ಅರಕಜಬ್ಬೆ ಮತ್ತು ಕುದ್ಕನ ಕಥೆಗಳು’ ಅವರ ಪ್ರಮುಖ ಕೃತಿಗಳು. ಬಾನ ದೇಬೆರೆ ತುಡರ್- ಕೊರಗ ತನಿಯ, ಸಾಮಾಜಿಕ ಹೋರಾಟದ ಗುರಿಕಾರರು ಕೃತಿಗಳು ಪ್ರಕಟಣೆಗೆ ಸಿದ್ಧವಾಗಿವೆ. ಕೊರಗರ ಅಜಲು ಕೃತಿ ಮರುಮುದ್ರಣದ ಹಂತದಲ್ಲಿದೆ.

ಅವರಿಗೆ ಕರಾವಳಿ ರತ್ನ, ಸಂಶೋಧಕ ರತ್ನ ಪುರಸ್ಕಾರ-೨೦೨೨, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ -೨೦೨೨ ಸಂದಿವೆ.

‘ಕೂಜಿನ ಪಾಟು’: ಡಿಜಿಟಲ್ ದಾಖಲೆ

ಅವರು ‘ಕೊರಗರ ಭಾಷೆ’ ಕೃತಿಯಲ್ಲಿ ಬರೆದ ‘ಕೂಜಿನ ಪಾಟು’ ಎಂಬ ಕವಿತೆ ಸಂಗೀತ ಹಾಗೂ ನೃತ್ಯದೊಂದಿಗೆ ಡಿಜಿಟಲೀಕರಣಗೊಂಡು ನಿಟ್ಟೆ ವಿವಿಯಲ್ಲಿ ಸೆ.೨೮ರಂದು ತೆರೆಕಂಡಿದೆ. ಇದು ಯೂಟ್ಯೂಬ್ ಪ್ರವೇಶಿಸಿದ ಮೊದಲ ಪೂರ್ಣಪ್ರಮಾಣದ ಕೊರಗ ಭಾಷೆಯ ಹಾಡು ಎಂಬ ದಾಖಲೆ ಸೃಷ್ಟಿಸಿದೆ. ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ರಾಗಸಂಯೋಜನೆ ಮಾಡಿದ್ದಾರೆ.

Share this article