ಜನರ ಸಮಸ್ಯೆ ಪರಿಹರಿಸದ ಅಧಿಕಾರಿ ಎತ್ತಂಗಡಿ: ಎಚ್ಚರಿಕೆ

KannadaprabhaNewsNetwork | Published : Jun 28, 2024 12:54 AM

ಸಾರಾಂಶ

ಜನರ ಅರ್ಜಿಗಳು ಸಲ್ಲಿಕೆಯಾದ 15 ದಿನಗಳೊಳಗೆ ಕಾನೂನು ತೊಡಕುಗಳಿರುವ ಸಮಸ್ಯೆ ಬಿಟ್ಟು ಉಳಿದ ಸಮಸ್ಯೆಗಳಿಗೆ ಅಧಿಕಾರಿಗಳು ಕೆಲಸ ನಿರ್ವಹಿಸದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಶಾಸಕ ಪುಟ್ಟಸ್ವಾಮಿ ಗೌಡ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡರ ನೇತೃತ್ವದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ಜರುಗಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅರ್ಜಿಗಳು ಸಲ್ಲಿಕೆಯಾದ 15 ದಿನಗಳೊಳಗೆ ಕಾನೂನು ತೊಡಕುಗಳಿರುವ ಸಮಸ್ಯೆ ಬಿಟ್ಟು ಉಳಿದ ಸಮಸ್ಯೆಗಳಿಗೆ ಅಧಿಕಾರಿಗಳು ಕೆಲಸ ನಿರ್ವಹಿಸದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಎತ್ತಂಗಡಿ ಮಾಡಲು ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.

ರಸ್ತೆ ಅಗಲೀಕರಣಕ್ಕೆ ಒತ್ತಾಯ

ಇದೇ ವೇಳೆ ತಾಲೂಕು ಕನ್ನಡಪರ ಸಂಘಟನೆಗಳ ವತಿಯಿಂದ ಎಂ.ಜಿ ರಸ್ತೆ ಅಗಲೀಕರಣ ವಿಷಯದಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಮಾಡಿರುವಂತೆ ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು, ಒತ್ತುವರಿಯಾಗಿರುವ ಅಂಗಡಿ, ಕಟ್ಟಡಗಳನ್ನು ನಿಯಮಾನುಸಾರ ಶೀಘ್ರವಾಗಿ ತೆರವುಗೊಳಿಸಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.ಆ್ಯಂಬುಲೆನ್ಸ್ ಸೇವೆಯಲ್ಲಿ ಲೋಪ, ವೈದ್ಯರ ಸ್ಪಂದನೆ ಸರಿಯಾದ ರೀತಿಯಲ್ಲಿ ಇಲ್ಲದಿರುವುದು, ಕುಡಿಯುವ ನೀರಿನ ಸಮಸ್ಯೆ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಸೌಲಭ್ಯ ಸಮಯಕ್ಕೆ ಇಲ್ಲದಿರುವುದು ಇನ್ನಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ವಿರುದ್ದ ಕರವೇ ಕಾರ್ಮಿಕ ಘಟಕದ ಅಧ್ಯಕ್ಷ ಛತ್ರಂ ಶ್ರೀಧರ್ ದೂರಿದರು.70 ಇ- ಖಾತೆ ವಿತರಣೆ

ಇದೇ ಸಂದರ್ಭದಲ್ಲಿ ನಗರಸಭೆ ವತಿಯಿಂದ 70 ಇ- ಖಾತೆಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು. ಕಂದಾಯ ಇಲಾಖೆ ವತಿಯಿಂದ 32 ಪಿಂಚಣಿ ಪತ್ರಗಳನ್ನು ನೀಡಲಾಯಿತು ಹಾಗೂ 3 ಮಂದಿ ಗ್ರಾಮ ಸಹಾಯಕರಿಗೆ ನೇಮಕಾತಿ ಆದೇಶಪತ್ರಗಳ ವಿತರಣೆ ಮಾಡಲಾಯಿತು. ಭಕ್ತರಿಗೆ ಸೌಲಭ್ಯ ಕಲ್ಪಿಸಲು ಕ್ರಮ

ಶ್ರೀ ಗಂಗಾಭಾಗೀರಥಿ ಸನ್ನಿಧಿಗೆ ಭಕ್ತಾದಿಗಳಿಗೆ ಸಮಸ್ಯೆಇರುವ ಬಗ್ಗೆ ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾಪಿಸಿದ ತಹಸೀಲ್ದಾರ್‌ ಮಹೇಶ್ ಎಸ್ ಪತ್ರಿ, ಕಾಮಗಾರಿ ನಡೆಸಲು ನಮ್ಮಲ್ಲಿ 50 ಲಕ್ಷದಷ್ಟು ಹಣವಿದೆ. 30 ಶೌಚಾಲಯ, 15 ಬಟ್ಟೆ ಬದಲಿಸುವ ಕೊಠಡಿಗಳು, ಬಂದಂತಹ ಭಕ್ತಾಧಿಗಳು ಪ್ರಸಾದ ಸ್ವೀಕರಿಸಲು ಸಿಮೆಂಟ್ ದಿಂಡುಗಳ ನಿರ್ಮಾಣ ಕಾಮಗಾರಿಗೆ ಕೊಟೇಷನ್ ಸಿದ್ಧಪಡಿಸಿ 2 ರಿಂದ 3 ತಿಂಗಳೊಳಗೆ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.ಸಭೆಯಲ್ಲಿ ಶ್ರೀನಿವಾಸಗೌಡ, ನಗರಸಭೆ ಆಯುಕ್ತರಾದ ಡಿ.ಎಂ.ಗೀತಾ, ಇ.ಒ. ಹೊನ್ನಯ್ಯ, ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಗುಗ್ಗರಿ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share this article