ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗೊಂಡಿದ್ದ ಪ್ರವಾಸದ ಬಗ್ಗೆ ಸಭೆ ನಡೆಸಿ ಮಾತನಾಡಿ, ಸರ್ಕಾರಿ ಇಲಾಖೆಯಲ್ಲಿ ಸೇವೆ ಮಾಡಲು ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದರು.
ಪ್ರತಿಯೊಬ್ಬರ ಜೀವನದಲ್ಲಿ ಹಣವು ಅಗತ್ಯ. ಹಣವನ್ನು ನ್ಯಾಯಯುತವಾಗಿ ದುಡಿದು ಸಂಪಾದಿಸಬೇಕು. ಯಾವುದೇ ಅಧಿಕಾರಿಗಳು ಹಣದ ದೃಷ್ಟಿಯಿಂದ ಕೆಲಸ ಮಾಡದೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಿದಾಗ ಸತತ ಪ್ರಯತ್ನ ಹಾಗೂ ಪ್ರಾಮಾಣಿಕ ಕೆಲಸಗಳಿಂದ ಯಶಸ್ಸು ದೊರೆಯುತ್ತದೆ ಎಂದರು.ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ- 2013 ದೇಶದ ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗಿದೆ. ಜಾರ್ಖಂಡ್, ಪಂಜಾಬ್, ಆಂಧ್ರಪ್ರದೇಶ ರಾಜ್ಯಗಳಲ್ಲಿ ಶೇ. 100 ರಷ್ಟು ಜಾರಿಯಾಗಿದೆ. ಆದರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಶೇ.90ರಷ್ಟು ಜಾರಿಯಲ್ಲಿದೆ. ನಮ್ಮ ರಾಜ್ಯದಲ್ಲೂ ಕೂಡ ಶೇ.100 ರಷ್ಟು ಜಾರಿಯಾಗಲು ಪ್ರತಿಯೊಬ್ಬರ ಸಹಕಾರವು ಮುಖ್ಯವಾಗಿದೆ ಎಂದರು.
ನಂತರ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಚೇರಿ, ಆಸ್ಪತ್ರೆ, ಪೆಟ್ರೋಲ್ ಬಂಕ್, ವಿದ್ಯಾರ್ಥಿ ನಿಲಯ, ಚಿನ್ನದ ಅಂಗಡಿ, ಅಕ್ಕಿ ಗಿರಣಿ, ಅಂಗನವಾಡಿ ಕೇಂದ್ರ, ಶಾಲಾ ಹಾಗೂ ಇನ್ನಿತರೆ ಭೇಟಿ ನೀಡಿ ಸಂಬಂಧಿಸಿದ ಅಧಿಕೃತ ವರದಿ ನೀಡಿದ್ದು, ಈ ವರದಿ ಮೇರೆಗೆ ಎಲ್ಲಾ ಅಧಿಕಾರಿಗಳು ಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಆಯೋಗಕ್ಕೆ ನೀಡಬೇಕು ಎಂದರು.
ಮಿಮ್ಸ್ ನಲ್ಲಿ ಬಹಳ ತೊಂದರೆಗಳು ಇರುವುದು ಕಂಡುಬಂದಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಉತ್ತಮ ಗುಣಮಟ್ಟದ ಆಹಾರ ನೀಡುವುದು ಅದಕ್ಕಿಂತ ಮುಖ್ಯ. ರೋಗಿಗಳಿಗೆ ಸರಿಯಾದ ಆಹಾರ ವಿತರಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದರು.