ದಸರಾ ಉದ್ಘಾಟನೆಗೆ ಬಾನುಗೆ ಅಧಿಕೃತ ಆಹ್ವಾನ

KannadaprabhaNewsNetwork |  
Published : Sep 04, 2025, 01:00 AM IST
36 | Kannada Prabha

ಸಾರಾಂಶ

ನಾಡಹಬ್ಬ ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಬುಧವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.

  ಮೈಸೂರು/ಹಾಸನ :  ನಾಡಹಬ್ಬ ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಬುಧವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.ದಸರಾ ವಿಶೇಷಾಧಿಕಾರಿಯೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಧ್ಯಾಹ್ನ 4 ಗಂಟೆಗೆ ಹಾಸನದ ಅಮೀರ್ ಮೊಹಲ್ಲಾದಲ್ಲಿರುವ ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿದರು. ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲ, ತಾಂಬೂಲ, ಆನೆ ವಿಗ್ರಹ ನೀಡಿ, ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡುವ ಮೂಲಕ ಅಧಿಕೃತವಾಗಿ ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಿದರು. ಸೆ.22ರಂದು ನಡೆಯಲಿರುವ ದಸರಾ ಉದ್ಘಾಟನೆಗೆ ಕುಟುಂಬ ಸಮೇತರಾಗಿ ಬರಬೇಕೆಂದು ಆಹ್ವಾನ ನೀಡಿದರು.

ದಸರಾ ಆಹ್ವಾನವನ್ನು ಪ್ರೀತಿಯಿಂದ ಒಪ್ಪಿಕೊಂಡ ಬಾನು ಮುಷ್ತಾಕ್, ತಮ್ಮನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿ, ದಸರಾ ಉದ್ಘಾಟನೆಗೆ ಬರುವುದಾಗಿ ತಿಳಿಸಿದರು. ತಮ್ಮನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ ಅಧಿಕಾರಿಗಳಿಗೆ ಶುಭನುಡಿ ಬರೆದು, ‘ಎದೆಯ ಹಣತೆ’ ಪುಸ್ತಕ ನೀಡಿದರು.

ಈ ವೇಳೆ, ಮೈಸೂರು ಅಪರ ಜಿಲ್ಲಾಧಿಕಾರಿ ಶಿವರಾಜ್, ಚಾಮುಂಡಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ, ಮೈಸೂರು ಜಿ.ಪಂ. ಸಿಇಒ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ತನ್ವಿರ್‌ ಆಸಿಫ್ ಹಾಜರಿದ್ದರು.

ದಸರಾ ಆಹ್ವಾನ ನಿರಾಕರಿಸಿ: ಬಾನುಗೆ ಮನವಿ ಸಲ್ಲಿಸಿದ ರಾಷ್ಟ್ರ ರಕ್ಷಣಾ ಸೇನೆನಾಡಹಬ್ಬ ದಸರಾ ಉದ್ಘಾಟನಾ ಆಹ್ವಾನವನ್ನು ನಿರಾಕರಿಸುವಂತೆ ಆಗ್ರಹಿಸಿ ರಾಷ್ಟ್ರ ರಕ್ಷಣಾ ಸೇನೆಯ ಕಾರ್ಯಕರ್ತರು ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬಾನು ಮುಷ್ತಾಕ್ ಅವರನ್ನು ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಬುಧವಾರ ಅಧಿಕೃತವಾಗಿ ಆಹ್ವಾನಿಸುವ ಮುನ್ನ ಅವರ ಮನೆಗೆ ತೆರಳಿದ ರಾಷ್ಟ್ರ ರಕ್ಷಣಾ ಸೇನೆಯ ರಾಜ್ಯ ಸಂಚಾಲಕ ಸುರೇಶ್‌ ಗೌಡ ಹಾಗೂ ಕಾರ್ಯಕರ್ತರು, ಮನವಿ ಮಾಡಿದರು. ಬಾನು ಅವರು ಮನವಿಪತ್ರವನ್ನು ಸ್ವೀಕರಿಸಿದರು.

ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್‌ ಗೌಡ, ಬಾನು ಮುಷ್ತಾಕ್‌ ಅವರು ಈ ಹಿಂದೆ ಭುವನೇಶ್ವರಿ ತಾಯಿಯನ್ನು ವಿರೋಧಿಸಿ ಮಾತನಾಡಿದ್ದಾರೆ. ದಸರಾ ನಾಡಹಬ್ಬವಾದರೂ ಅದು ನಮ್ಮ‌ ಹಿಂದೂ ಸಂಪ್ರದಾಯದ ಹಬ್ಬ. ಹಾಗಾಗಿ, ನಮ್ಮ ಸಂಸ್ಕೃತಿ ಒಪ್ಪದ ನೀವು ದಸರಾ ಉದ್ಘಾಟನೆಯಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಸಾಹಿತಿಗಳಾದ ನೀವು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ. ಆದರೆ, ದಸರಾ ಉದ್ಘಾಟನೆಯಿಂದ ನೀವಾಗಿಯೇ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ್ದೇವೆ ಎಂದರು.

PREV
Read more Articles on

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ