ಕೊಟ್ಟೂರು: ತಾಲೂಕು ಕೇಂದ್ರದಲ್ಲಿ ನಡೆಯುವ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಕೂಡ್ಲಿಗಿ ತಾಲೂಕು ಕೇಂದ್ರದಿಂದ ಬಹುತೇಕ ಇಲಾಖೆ ಅಧಿಕಾರಿಗಳು ಬಾರದೇ ನಿರ್ಲಕ್ಷ್ಯ ತೋರಿದ್ದು, ಇದು ಪುನಾರಾವರ್ತನೆಯಾದಲ್ಲಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಹಸೀಲ್ದಾರ ಜಿ.ಕೆ. ಅಮರೇಶ ಖಡಕ್ಕಾಗಿ ಎಚ್ಚರಿಕೆ ನೀಡಿದರು.ತಾಲೂಕು ಕಚೇರಿ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಗುರುವಾರ ಮಾತನಾಡಿದರು.
ತಾಲೂಕು ಕೇಂದ್ರವಾಗಿದ್ದರೂ ಕೊಟ್ಟೂರಿನಲ್ಲಿ ಎಲ್ಲ ಇಲಾಖೆಗಳು ಪ್ರಾರಂಭವಾಗಿಲ್ಲ. ಹೀಗಾಗಿ ಹಿಂದಿನ ತಾಲೂಕು ಕೇಂದ್ರದಿಂದಲೇ ಇಲಾಖೆ ಅಧಿಕಾರಿಗಳು ಸಭೆಗೆ ಬರಬೇಕು. ಆದರೆ ಬಹುತೇಕ ಇಲಾಖೆಯವರು ಸಭೆಗಳಿಗೆ ಸತತ ಗೈರಾಗಿ ನಿರ್ಲಕ್ಷ್ಯ ತೋರುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ಗೈರಾದರೆ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡುವುದಾದರು ಹೇಗೆ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಕರೆಯುವ ಯಾವುದೇ ತಾಲೂಕು ಮಟ್ಟದ ಸಭೆಗೆ ಇಲಾಖೆಯವರು ಗೈರಾದರೆ ಮೇಲಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಎಲ್ಲರೂ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು. ಪಥ ಸಂಚಲನದಲ್ಲಿ ಸಣ್ಣ ಮಕ್ಕಳನ್ನು ಬಳಸದೇ ಪ್ರೌಢ ಶಾಲೆ ಮಕ್ಕಳನ್ನು ಮಾತ್ರ ಬಳಸಿಕೊಳ್ಳಬೇಕು. ಪಥ ಸಂಚಲನದಲ್ಲಿ 10 ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 10 ತಂಡಗಳನ್ನು ಆಯ್ಕೆ ಮಾಡಿ ಸಮರ್ಪಕವಾಗಿ ತಾಲೀಮು ನಡೆಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಎಸಿ ಎಚ್.ವಿಜಯಕುಮಾರ, ವೈದ್ಯಾಧಿಕಾರಿ ಬದ್ಯಾನಾಯ್ಕ, ಜೆಸ್ಕಾಂ ಎಸ್.ಎ. ಚೇತನ್, ಉಪನ್ಯಾಸಕ ಜಗದೀಶ್‌ಚಂದ್ರ ಬೋಸ್, ಮುಖ್ಯಗುರು ಬಸವರಾಜ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಮರುಳನಗೌಡ, ಇಸಿಒ ನಿಂಗಪ್ಪ, ಸಿ.ಅಜ್ಜಪ್ಪ, ಡಿಎಸ್‌ಎಸ್ ಮುಖಂಡರಾದ ಬದ್ದಿಮರಿಸ್ವಾಮಿ, ಹನುಮಂತಪ್ಪ, ರೈತ ಸಂಘದ ಉಪಾಧ್ಯಕ್ಷ ಎನ್.ಭರಮಣ್ಣ, ಶಾಲೆ ಕಾಲೇಜುಗಳ ಮುಖ್ಯಸ್ಥರು, ಕೆಲವೇ ಇಲಾಖೆ ಅಧಿಕಾರಿಗು ಇದ್ದರು. ಸಿ.ಮ. ಗುರುಬಸವರಾಜ ನಿರ್ವಹಿಸಿದರು.