ಕನ್ನಡಪ್ರಭ ವಾರ್ತೆ ಘಟಪ್ರಭ:
ಪಟ್ಟಣದಲ್ಲಿ ಆನ್‌ಲೈನ್ ಕೇಂದ್ರಗಳ ಮೇಲೆ ತಾಲೂಕು ದಂಡಾಧಿಕಾರಿ ಹಾಗೂ ಪುರಸಭೆ ಅಧಿಕಾರಿಗಳು ದಾಳಿ ಮಾಡಿ ಗ್ರಾಹಕರಿಂದ ನಿಗದಿಗಿಂತಲೂ ಅಧಿಕ ಶುಲ್ಕ ಪಡೆಯುತ್ತಿದ್ದ ಮೂರು ಆನ್‌ಲೈನ್ ಕೇಂದ್ರಗಳನ್ನು ಸೀಜ್ ಮಾಡಿ ಕಂಪ್ಯೂಟರ್ ಸೇರಿದಂತೆ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.ಘಟಪ್ರಭಾ ಪಟ್ಟಣದ ಮೇನ್ ರೋಡ್, ಮೃತ್ಯುಂಜಯ ಸರ್ಕಲ್, ಕಾಳಿನ ಪೇಟೆ ಪ್ರದೇಶಗಲ್ಲಿದ್ದ ಲವಕುಶ ಎಂಬ ಹೆಸರಿನ ಮೂರು ಆನ್‌ಲೈನ್ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಈ ಕೇಂದ್ರಗಳು ಘಟಪ್ರಭಾದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿದಂದ ಅನುಮತಿ ಪಡೆಯದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತ ಆಧಾರ್ ಕಾರ್ಡ್ ತಿದ್ದುಪಡಿ, ಮತದಾರರ ಗುರುತಿನ ಚೀಟಿ ತಿದ್ದುಪಡಿ, ಮತದಾರರ ವಯಸ್ಸಿನ ತಿದ್ದುಪಡಿ, ಪಾನ್‌ಕಾರ್ಡ್ ತಿದ್ದುಪಡಿ ಅಲ್ಲದೆ ಇನ್ನು ವಿವಿಧ ದಾಖಲೆಗಳ ಕೆಲಸಗಳನ್ನು ಮಾಡುತ್ತಿದ್ದು, ಸಾರ್ವಜನಿಕರಿಂದ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್‌ಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನಲೆಯಲ್ಲಿ ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಕಂದಾಯ ನಿರೀಕ್ಷಕ ಎಸ್.ಐ. ಹಿರೇಮಠ, ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಹಂಚಿನಾಳ, ಘಟಪ್ರಭಾ ಪುರಸಭೆ ಮುಖ್ಯಾಧಿಕಾರಿ ಎಂ.ಎಸ್. ಪಾಟೀಲ, ಪುರಸಭೆ ಕಂದಾಯ ಅಧಿಕಾರಿ ಶ್ರೀಧರ ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಈ ವೇಳೆ ಹಾಜರಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಘಟಪ್ರಭಾದಲ್ಲಿರುವ ಲವ-ಕುಶ ಆನ್‌ಲೈನ್ ಕೇಂದ್ರದವರು ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಆನ್‌ಲೈನ್ ಕೇಂದ್ರಗಳನ್ನು ತೆರೆದಿದ್ದು, ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆದು ವಂಚಿಸುತ್ತಿರುವ ಬಗ್ಗೆ ದೂರವಾಣಿ ಹಾಗೂ ಲಿಖಿತವಾಗಿ ಸಾರ್ವಜನಿಕರ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ದಾಳಿ ಮಾಡಿ ಆ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಇನ್ನು ಮುಂದೆಯೂ ಯಾವುದೆ ಅಧಿಕೃತ ಆನ್‌ಲೈನ್ ಕೇಂದ್ರದವರು ಆಧಾರ್ ಕಾರ್ಡ್ ತಿದ್ದುಪಡಿಗೆ ₹50ಕ್ಕಿಂತ ಹೆಚ್ಚಿಗೆ ಶುಲ್ಕ ತೆಗೆದುಕೊಂಡರೆ ನೇರವಾಗಿ ನನಗೆ ಸಂಪರ್ಕಿಸಿ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.