ಹೂವಿನಹಡಗಲಿ: ಪುರಸಭೆಯಲ್ಲಿ ಅಧಿಕಾರಿಗಳ ದರ್ಬಾರ್ ಹೆಚ್ಚಾಗಿದೆ. ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿವೆ. 2-3 ಅಧಿಕಾರಿಗಳನ್ನು ಅಮಾನತು ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ. ಆಗ ಪುರಸಭೆ ಸರಿದಾರಿಗೆ ಬರುತ್ತದೆ ಎಂದು ಕಾದು ನೋಡಬೇಕಿದೆ ಎಂದು ಶಾಸಕ ಕೃಷ್ಣ ನಾಯ್ಕ ಹೇಳಿದರು.ಪುರಸಭೆಯ ಬಜೆಟ್ ಮಂಡನೆ ವೇಳೆ ಮಾತನಾಡಿದ ಶಾಸಕರು, ಪುರಸಭೆ ಮುಖ್ಯಾಧಿಕಾರಿ ಪಟ್ಟಣಕ್ಕೆ ದೊರೆ ಅಲ್ಲ. ಜನರ ಕೆಲಸ ಮಾಡುವುದನ್ನು ಕಲಿಯಿರಿ, ಯಾವುದೇ ಸದಸ್ಯರ ಕುಟುಂಬದವರ ಹಸ್ತಕ್ಷೇಪ ಸಹಿಸಲ್ಲ. ಸದಸ್ಯರ ಮಾತು ಮಾತ್ರ ಕೇಳಬೇಕೆಂದು ಶಾಸಕ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಪಟ್ಟಣದ ಅಭಿವೃದ್ಧಿಗಾಗಿ ₹40 ಕೋಟಿ ಕ್ರಿಯಾ ಯೋಜನೆ ಈಗಾಗಲೇ ಮಂಜೂರಾಗಿದೆ. ಪಟ್ಟಣಕ್ಕೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಶಾಸಕರು ಹೇಳಿದರು.ಬಜೆಟ್ ಸಭೆಯ ನೋಟಿಸ್ ನೀಡಿಲ್ಲ: ಪುರಸಭೆಯ ಬಜೆಟ್ ಸಭೆಯ ಕುರಿತು ಸದಸ್ಯರಿಗೆ ನೋಟಿಸ್ ನೀಡುವಷ್ಟು ಸಮಯ ಇಲ್ಲವೇ? ನಾವೇನು ಇಲ್ಲಿ ಚಹಾ ಕುಡಿದು ಹೋಗಲು ಬಂದಿಲ್ಲ, ಸದಸ್ಯರಿಗೆ ಗೌರವವೇ ಇಲ್ಲದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆಂದು ಸದಸ್ಯ ವಾರದ ಗೌಸ್ ಮೋಹಿದ್ದೀನ್ ಆರೋಪಿಸಿದರು.
ವಾರ್ಡ್‌ಗಳಲ್ಲಿ ಜನರಿಗೆ ಸರಿಯಾಗಿ ಕುಡಿವ ನೀರಿಲ್ಲ, ಕರೆಂಟ್ ಇಲ್ಲದೇ ಕತ್ತಲೆಯಾಗಿದೆ. ಸ್ವಚ್ಛತೆ ಇಲ್ಲದೇ ಸೊಳ್ಳೆಗಳಿಂದ ಜನ ರೋಸಿ ಹೋಗಿದ್ದಾರೆ, ಮುಖ್ಯಾಧಿಕಾರಿ ಒಂದೂ ವಾರ್ಡ್‌ಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿಲ್ಲ ಎಂದು ಮಹಿಳಾ ಸದಸ್ಯರು ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.ಇದಕ್ಕೆ ಸ್ಪಂದಿಸಿದ ಶಾಸಕ ಕೃಷ್ಣ ನಾಯ್ಕ, ಬಜೆಟ್ ಸಭೆ ಮುಂದೂಡಲು ಬರುವುದಿಲ್ಲ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹೂವಿನಹಡಗಲಿಗೆ ಯಾವ ಹೊಸ ಯೋಜನೆಗಳನ್ನು ರಾಜ್ಯ ಸರ್ಕಾರ ನೀಡಿಲ್ಲ. ಬಜೆಟ್‌ನಲ್ಲಿ ಹೂವಿನಹಡಗಲಿ ಹೆಸರೇ ಇಲ್ಲದಂತಾಗಿದೆ. ಯಾರೂ ಹಠ ಮಾಡದೇ ಬಜೆಟ್‌ಗೆ ಒಪ್ಪಿಗೆ ನೀಡಬೇಕೆಂದು ಸದಸ್ಯರ ಮನವೊಲಿಸಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ಉಪಸ್ಥಿತರಿದ್ದರು.₹55 ಲಕ್ಷ ಉಳಿತಾಯ ಬಜೆಟ್: 2024-25ನೇ ಸಾಲಿನ ಪುರಸಭೆಯ ₹55.47 ಲಕ್ಷ ಉಳಿತಾಯ ಬಜೆಟ್‌ನ್ನು ಪುರಸಭೆ ಆಡಳಿತಾಧಿಕಾರಿ ಚಿದಾನಂದ ಗುರುಸ್ವಾಮಿ ಮಂಡಿಸಿದರು.ಪುರಸಭೆಯ ಎಂ.ಪಿ.ಪ್ರಕಾಶ ಸಭಾಂಗಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಬಜೆಟ್ ಮಂಡಿಸಿತ್ತಾ, ಈ ಬಾರಿ ₹21.29 ಕೋಟಿ ಆದಾಯ ನಿರೀಕ್ಷಿಸಿದ್ದು, ಇದರಲ್ಲಿ ₹20.73 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ₹55.47 ಲಕ್ಷ ಉಳಿತಾಯ ಬಜೆಟ್ ಮಂಡನೆಯಾಗಿದೆ.ತ್ಯಾಜ್ಯ ನಿರ್ವಹಣೆ ಮೂಲಕ ಸ್ವಚ್ಛ ನಗರ ನಿರ್ಮಾಣ, ಕಲ್ಯಾಣ ಕಾರ್ಯಕ್ರಮಗಳಿಗೆ ಕ್ರಮ ವಹಿಸಲಾಗಿದೆ. ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ನಿರಂತರ ತರಬೇತಿ ನೀಡಿ ದಕ್ಷತೆ, ಜನಸ್ನೇಹಿಯಾಗಿ ಸಾರ್ವಜನಿಕರಿಗೆ ಸ್ವಂದಿಸಬೇಕು. ಪುರಸಭೆ ಸದಸ್ಯರಿಗೆ ಅಧ್ಯಯನ ಪ್ರವಾಸಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿದ್ದಾರೆ.ಸಕಾಲ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಕಾರ್ಯಗಳನ್ನು ಗುರುತಿಸಿ ಅಂತಹ ಸೇವೆಗಳಿಗೆ ಗರಿಷ್ಠ ಕಾಲಾವಕಾಶ ನಿಗದಿಪಡಿಸಿ ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವುದು. ಕಚೇರಿ ಕೆಲಸಗಳಲ್ಲಿ ಶಿಸ್ತು ಪರಿಪಾಲನೆಗಾಗಿ ಇ-ಆಫೀಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಬಜೆಟ್‌ನಲ್ಲಿ ಘೋಷಣೆಯಾಗಿದೆ.ಪುರಸಭೆ ವ್ಯಾಪ್ತಿಯ ತೆರಿಗೆದಾರರ ಅನುಕೂಲಕ್ಕಾಗಿ ಹೊಸೆ ವೆಬ್ ಮತ್ತು ಆಪ್ ತಂತ್ರಾಂಶದಿಂದ ಮನೆಯಿಂದಲೇ ತೆರಿಗೆ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇ-ಆಸ್ತಿ ತಂತ್ರಾಂಶದಲ್ಲಿ ಪುರಸಭೆಯ ಎಲ್ಲ ಆಸ್ತಿಗಳನ್ನು ದಾಖಲಿಸಿ ಪ್ರಮಾಣಪತ್ರ ಪೂರೈಸುವ ಕಾರ್ಯವನ್ನು ಶೇ.100ರಷ್ಟು ಸಾಧಿಸಲು ಕ್ರಮ ವಹಿಸಲಾಗುತ್ತಿದೆ.