ವಾರ್ಡ್‌ಗಳ ಸ್ವಚ್ಛತೆ ನಿರ್ವಹಿಸುವಲ್ಲಿ ಅಧಿಕಾರಿಗಳು ವಿಫಲ

KannadaprabhaNewsNetwork | Published : May 29, 2024 12:47 AM

ಸಾರಾಂಶ

ಪಾಂಡವಪುರ ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಬಸವರಾಜು, ಕಿರಿಯ ಆರೋಗ್ಯಾಧಿಕಾರಿ ನಿಂಗೇಗೌಡ, ಪೌರಕಾರ್ಮಿಕರ ಮೇಸ್ತ್ರಿ ಸುಬ್ರಹ್ಮಣ್ಯ ಹಾಗೂ ಮೇಲ್ವಿಚಾರಕ ಬೀರಶೆಟ್ಟಹಳ್ಳಿ ರಮೇಶ್ ಅವರ ವಿರುದ್ಧ ಕರ್ತವ್ಯ ಲೋಪದಡಿ ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಪುರಸಭೆ ಸದಸ್ಯರು ಮುಖ್ಯಾಧಿಕಾರಿ ವೀಣಾ ಅವರಿಗೆ ಮನವಿ ಸಲ್ಲಿಕೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಪ್ರತಿಯೊಂದು ವಾರ್ಡ್‌ಗಳ ಸ್ವಚ್ಛತೆ ನಿರ್ವಹಿಸುವಲ್ಲಿ ಪುರಸಭೆ ಆರೋಗ್ಯಾಧಿಕಾರಿಗಳು ವಿಫಲರಾಗಿದ್ದು, ಅಧಿಕಾರಿಗಳ ಕಾರ್ಯವೈಖರಿಯಿಂದ ಸದಸ್ಯರು ಮತದಾರರ ಬಳಿ ಮಾತು ಕೇಳಬೇಕಿದೆ. ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕೆಂದು ಪುರಸಭೆ ಸದಸ್ಯರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಾಜರಾಗಿರುವ ಪೌರಕಾರ್ಮಿಕರು ಪಟ್ಟಣದ ಯಾವ್ಯಾವ ವಾರ್ಡ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಹಿರಿಯ ಆರೋಗ್ಯಾಧಿಕಾರಿ ಬಸವರಾಜು, ಕಿರಿಯ ಆರೋಗ್ಯಾಧಿಕಾರಿ ನಿಂಗೇಗೌಡ, ಮೇಸ್ತ್ರಿ ಸುಬ್ರಹ್ಮಣ್ಯ ಹಾಗೂ ಉಸ್ತುವಾರಿ ರಮೇಶ್ ಅವರೊಡನೆ ಪಟ್ಟಣದ ಪ್ರತಿ ವಾರ್ಡ್‌ಗಳಿಗೂ ತೆರಳಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಮಾಹಿತಿ ಪಡೆದ ಬಳಿಕ ಪುರಸಭೆ ಮುಖ್ಯಾಧಿಕಾರಿ ವೀಣಾ ಅವರ ಬಳಿಗೆ ತೆರಳಿ ಆರೋಗ್ಯಾಧಿಕಾರಿಗಳ ಕರ್ತವ್ಯ ನಿಷ್ಠೆಯ ಬಗ್ಗೆ ಪುರಸಭೆ ಸದಸ್ಯರು ಪ್ರಶ್ನೆ ಮಾಡಿದರು.

ಪುರಸಭೆ ವ್ಯಾಪ್ತಿಯ ವಾರ್ಡ್‌ಗಳ ಸ್ವಚ್ಛತೆಗಾಗಿ ೩೩ ಪೌರ ಕಾರ್ಮಿಕರು ನೇಮಕವಾಗಿದ್ದಾರೆ. ಈ ಪೈಕಿ ಪ್ರತಿನಿತ್ಯ ಐದರಿಂದ ಆರು ನೌಕರರು ಅನ್ಯ ಕಾರಣಗಳಿಂದಾಗಿ ಗೈರಾಗುತ್ತಿದ್ದರೆ. ಉಳಿದ ನೌಕರರನ್ನು ಸಮರ್ಥವಾಗಿ ಬಳಿಸಿಕೊಂಡು ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆ ಆರೋಗ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಸೋಮವಾರ ಮೇ ೨೭ರಂದು ಹಾಜರಾತಿ ಪುಸ್ತಕದಲ್ಲಿ ೨೬ ಪೌರ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಹಾಜರಾತಿ ಪುಸ್ತಕದಲ್ಲಿ ನಮೂದಾಗಿದೆ. ಆದರೆ, ಈ ಬಗ್ಗೆ ಆರೋಗ್ಯಾಧಿಕಾರಿಗಳ ಜತೆಯಲ್ಲೇ ತೆರಳಿ ಪರಿಶೀಲನೆ ನಡೆಸಿದ್ದಾಗ ಕೇವಲ ೧೯ ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುತ್ತಿರುವುದು ಪಾತ್ಯ್ಯಕ್ಷತೆಯಿಂದ ತಿಳಿದು ಬಂದಿದೆ. ಕೆಲಸಕ್ಕೆ ಬಾರದ ಕಾರ್ಮಿಕರಿಗೂ ಕೂಡ ಯಾವ ಕಾರಣಕ್ಕಾಗಿ ಹಾಜರಾತಿ ನೀಡಲಾಗಿದೆ ಎಂಬುದನ್ನು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು.

ಪುರಸಭೆ ಮುಖ್ಯಾಧಿಕಾರಿ ವೀಣಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ಇರುವ ೩೩ ಪೌರ ಕಾರ್ಮಿಕರಲ್ಲಿ ಆರೋಗ್ಯದ ಸಮಸ್ಯೆಯಿಂದ ಪ್ರತಿನಿತ್ಯ ಐದಾರು ಕಾರ್ಮಿಕರು ಗೈರಾಗುತ್ತಿದ್ದಾರೆ. ಗೈರಾದ ಕಾರ್ಮಿಕರಿಗೆ ಸಂಬಳವನ್ನು ಕೂಡ ಪಾವತಿಸುತ್ತಿಲ್ಲ. ಪಟ್ಟಣದ ಸ್ವಚ್ಛತೆ ವಿಚಾರದಲ್ಲಿ ಪುರಸಭೆ ಸದಸ್ಯರು ಮಧ್ಯಪ್ರವೇಶಿಸದಿದ್ದರೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸುತ್ತಾರೆ.

ಇಲ್ಲಿ ನಾವು ಹೇಳಿದಂತೆ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಪುರಸಭೆ ಸದಸ್ಯರು ತಮ್ಮಿಷ್ಟ ಬಂದಂತೆ ಪೌರ ಕಾರ್ಮಿಕರನ್ನು ತಮ್ಮ ತಮ್ಮ ವಾರ್ಡ್‌ಗಳಿಗೆ ಕರೆದುಕೊಂಡು ಹೋಗುವುದರಿಂದ ಸಮಸ್ಯೆ ಉಲ್ಬಣವಾಗುತ್ತಿದೆ. ಅಧಿಕಾರಿಗಳ ಜವಾಬ್ದಾರಿಗೆ ಬಿಟ್ಟರೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಆರೋಗ್ಯಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದು ಅರಿವಿಗೆ ಬಂದಿದೆ. ಸದಸ್ಯರು ಅಧಿಕಾರಿಗಳೊಂದಿಗೆ ಕೈಜೋಡಿಸಿದರೆ ಸಮಸ್ಯೆ ಬರುವುದಿಲ್ಲ. ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಹಿರಿಯ ಆರೋಗ್ಯಾಧಿಕಾರಿ ಬಸವರಾಜು, ಕಿರಿಯ ಆರೋಗ್ಯಾಧಿಕಾರಿ ನಿಂಗೇಗೌಡ, ಪೌರಕಾರ್ಮಿಕರ ಮೇಸ್ತ್ರಿ ಸುಬ್ರಹ್ಮಣ್ಯ ಹಾಗೂ ಮೇಲ್ವಿಚಾರಕ ಬೀರಶೆಟ್ಟಹಳ್ಳಿ ರಮೇಶ್ ಅವರ ವಿರುದ್ಧ ಕರ್ತವ್ಯ ಲೋಪದಡಿ ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಪುರಸಭೆ ಸದಸ್ಯರು ಮುಖ್ಯಾಧಿಕಾರಿ ವೀಣಾ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಶಿವಕುಮಾರ್, ಚಂದ್ರು, ಜೆಡಿಎಸ್ ಮುಖಂಡರಾದ ಹಾರೋಹಳ್ಳಿ ಉಮೇಶ್, ಜಯರಾಮು, ಆರ್ಮುಗಂ ಇತರರಿದ್ದರು.

Share this article