ಅಧಿಕಾರಿಗಳೇ ನೀರು, ನೈರ್ಮಲ್ಯಕ್ಕೆ ಆದ್ಯತೆ ನೀಡಿ: ಜಿಪಂ ಸಿಇಒ ಸದಾಶಿವ ಪ್ರಭು

KannadaprabhaNewsNetwork |  
Published : Feb 15, 2024, 01:33 AM IST
ಹೂವಿನಹಡಗಲಿ ತಾಲೂಕಿನ ಇಟಗಿ ಗ್ರಾಮದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಜಿಪಂ ಸಿಇಒ ಸದಾಶಿವ ಪ್ರಭು ಮಾತನಾಡಿದರು.  | Kannada Prabha

ಸಾರಾಂಶ

ಗ್ರಾಮೀಣಾಭಿವೃದ್ಧಿಗಾಗಿ ಎಲ್ಲರ ಸಲಹೆ ಹಾಗೂ ಸಹಕಾರ ನೀಡಬೇಕಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಕಾರ್ಯಗಳು ಮಾಡದಿದ್ದರೆ ಜನರಿಗೆ ತೊಂದರೆ ಉಂಟಾಗುತ್ತವೆ.

ಹೂವಿನಹಡಗಲಿ: ಬೇಸಿಗೆ ಸಮೀಪಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ನೈರ್ಮಲ್ಯವನ್ನು ಅಧಿಕಾರಿಗಳು ಕಾಪಾಡಬೇಕೆಂದು ಜಿಪಂ ಸಿಇಒ ಬಿ. ಸದಾಶಿವ ಪ್ರಭು ಸೂಚಿಸಿದರು.

ತಾಲೂಕಿನ ಇಟಗಿ ಗ್ರಾಮದಲ್ಲಿ ಜಿಪಂ ಹಾಗೂ ತಾಪಂ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಪರಿಕಲ್ಪನೆಯು ಯಶಸ್ವಿಯಾಗಲು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಬಾಲ್ಯ ವಿವಾಹದಂಥ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಅಗತ್ಯ ಇದೆ ಎಂದರು.

ಗ್ರಾಮೀಣಾಭಿವೃದ್ಧಿಗಾಗಿ ಎಲ್ಲರ ಸಲಹೆ ಹಾಗೂ ಸಹಕಾರ ನೀಡಬೇಕಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಕಾರ್ಯಗಳು ಮಾಡದಿದ್ದರೆ ಜನರಿಗೆ ತೊಂದರೆ ಉಂಟಾಗುತ್ತವೆ. ಈ ಸಭೆಯಲ್ಲಿ ಎಲ್ಲರೂ ಮುಕ್ತವಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಸರ್ಕಾರದ ನೀತಿ- ನಿಯಮಗಳಲ್ಲಿ ಏನಾದರೂ ಬದಲಾವಣೆ ಆಗಬೇಕೆಂದರೆ ತಮ್ಮ ಅಹವಾಲುಗಳಿಗೆ ಸ್ವಾಗತ ಇರುತ್ತದೆ ಎಂದರು.

ಕುಂದು- ಕೊರತೆಗಳಿಗೆ ಶೀಘ್ರ ಪರಿಹಾರ: ಇಟಗಿ ಗ್ರಾಮದಲ್ಲಿ ಸಂಗ್ರಹಿಸುವ ಹಸಿ ಹಾಗೂ ಒಣ ಕಸವನ್ನು ಹಳ್ಳದಲ್ಲಿ ವಿಲೇವಾರಿ ಮಾಡುತ್ತಿದ್ದು, ಅದನ್ನು ತಪ್ಪಿಸಲು ಸೂಕ್ತ ಸ್ಥಳ ಗುರುತಿಸಿ ಸರಿಯಾದ ಕ್ರಮದಲ್ಲಿ ಕಸ ವಿಲೇವಾರಿ ಮಾಡಲು ಪಿಡಿಒಗೆ ಸೂಚಿಸಿದರು.

ಕೋಳಿ ಮಾಂಸದ ಅಂಗಡಿ ಹಾಗೂ ಇತರೆ ಅಂಗಡಿಗಳ ಮಾಲೀಕರು ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿದ್ದಾರೆ ಎಂದು ಜನ ದೂರಿದರು. ಇದಕ್ಕೆ ಸ್ಪಂದಿಸಿದ ಜಿಪಂ ಸಿಇಒ ಸಂಬಂಧಿಸಿದ ಅಂಗಡಿಯವರಿಗೆ ನೋಟಿಸ್ ನೀಡಲು ಪಿಡಿಒಗೆ ತಿಳಿಸಿದರು.

ಗ್ರಾಮದಲ್ಲಿ ಕುಡಿಯುವ ನೀರು, ಸ್ವಚ್ಛತೆ ಕೊರತೆ ಇದೆ. ಇದನ್ನು ಶೀಘ್ರ ಬಗೆಹರಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿರಂತರ ನುರಿತ ವೈದ್ಯರು ಭೇಟಿ ನೀಡಬೇಕು. ಹೆರಿಗೆಗೆ ತೆರಳುವ ಮಹಿಳೆಯರಿಗೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆ ಮಾಡಿಸಬೇಕು. ಹೆರಿಗೆ ತಜ್ಞ ವೈದ್ಯರನ್ನು ನೇಮಿಸುವಂತೆ ಡಿಎಚ್ಒಗೆ ಸ್ಥಳದಲ್ಲೇ ದೂರವಾಣಿಯ ಮೂಲಕ ಕರೆ ಮಾಡಿ ಸೂಚಿಸಿದರು.

ವಿದ್ಯುತ್ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಅವುಗಳನ್ನು ಸ್ಥಳಾಂತರಿಸಲು ಜೆಸ್ಕಾಂ ಎಇಇಗೆ ಸೂಚಿಸಿದರು. ಗ್ರಾಮದ ಸ್ವ ಸಹಾಯ ಸಂಘದ‌ ಮಹಿಳೆಯರ ಗುಂಪುಗಳಿಗೆ ವರ್ಕ್ ಶೆಡ್ ಇಲ್ಲ ಎಂದು ಜನ ದೂರಿದರು. ನರೇಗಾ ಹೆಚ್ಚುವರಿ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಿ ಹೊಸ ಕಟ್ಟಡ ನಿರ್ಮಿಸಲು ಪಿಡಿಒಗೆ ಸೂಚಿಸಿದರು.

ಗ್ರಾಮದಲ್ಲಿ ಲೇಔಟ್‌ಗೆ ಸಂಬಂಧಿಸಿದಂತೆ, ರಸ್ತೆ, ಚರಂಡಿ, ವಸತಿ‌ಗೆ ಸಂಬಂಧಪಟ್ಟ ಕುಂದು-ಕೊರತೆಗಳನ್ನು ಶೀಘ್ರ ಪರಿಹಾರ ಮಾಡಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸಿಇಒ ಗಡುವು ನೀಡಿದರು.

ಬಾಲ್ಯವಿವಾಹ ಮಾಡುವುದು ಅಪರಾಧ. ಪ್ರತಿಯೊಬ್ಬ ಪಾಲಕರು ಹೆಣ್ಣುಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಲಿಸಬೇಕಿದೆ. ಅವರನ್ನು ಶಿಕ್ಷಣವಂತರನ್ನಾಗಿ ಮಾಡಿದಾಗ, ಆ ಕುಟುಂಬ ಸುಖಿ ಕುಟುಂಬವಾಗಲು ಸಾಧ್ಯವಿದೆ. ಜತೆಗೆ ಪ್ರತಿಯೊಬ್ಬರೂ ಶೌಚಾಲಯಗಳನ್ನು ಬಳಸಿ, ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಬೇಕೆಂದು ಜಿಪಂ ಸಿಇಒ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಬಿ. ಸಿದ್ದಪ್ಪ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅಂಬೇಡ್ಕರ್‌, ತಾಪಂ ಎಡಿ ಹೇಮಾದ್ರಿ ನಾಯ್ಕ, ನರೇಗಾ ಎಡಿ ವೀರಣ್ಣ ನಾಯ್ಕ, ಪಿಡಿಒ ಉಮೇಶ ಜಾಗೀರದಾರ್, ತಾಂತ್ರಿಕ ಸಂಯೋಜಕ ಟಿ. ರವಿಕುಮಾರ, ತಾಲೂಕು ಐಇಸಿ ಸಂಯೋಜಕ ಪ್ರಕಾಶನಾಯ್ಕ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ನೀರು ದರ ಶೇ.3 ಹೆಚ್ಚಳ
ಇಂದು ವರ್ಣರಂಜಿತ ಬೆಂಗಳೂರು ಕರಗ