ಹಾನಗಲ್ಲ: ರಸಗೊಬ್ಬರದ ಅಕ್ರಮ ಸಂಗ್ರಹ, ಕಾಳಸಂತೆಯಲ್ಲಿ ಮಾರಾಟ, ಎಂಆರ್‌ಪಿ ದರ ಉಲ್ಲಂಘಿಸಿ ಮಾರಾಟ ಕಾನೂನು ಬಾಹೀರವಾಗಿದ್ದು, ಇಂತಹ ಪ್ರಕರಣಗಳ ಬಗ್ಗೆ ಖರೀದಿದಾರರು ನಿರ್ದಾಕ್ಷಿಣ್ಯವಾಗಿ ದೂರು ನೀಡಿ, ಕೃಷಿ ಇಲಾಖೆ ಕೂಡ ಅಂಥವರ ಮೇಲೆ ನಿಗಾ ಇಡಬೇಕು ಎಂದು ತಹಸೀಲ್ದಾರ್ ಎಸ್. ರೇಣುಕಾ ಕಟ್ಟಪ್ಪಣೆ ಮಾಡಿದರು.
ಹಾವೇರಿ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಶಿವಕುಮಾರ ಮಲ್ಲಾಡದ ಮಾತನಾಡಿ, ರಸಗೊಬ್ಬರದ ಕೊರತೆ ಇಲ್ಲ. ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟಕ್ಕೂ ಅವಕಾಶವಿಲ್ಲ. ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸೀದಿ ಸಹಿತ ಮಾರಾಟ ಮಾಡಬೇಕು. ನ್ಯಾನೋ ಗೊಬ್ಬರ ಮಾರಾಟದ ಪ್ರಾತ್ಯಕ್ಷಿಕೆಯನ್ನು ಪ್ರತಿ ಹಳ್ಳಿಯಲ್ಲಿ ನಡೆಸಲಾಗುವುದು. ನ್ಯಾನೋ ರಸಗೊಬ್ಬರ ಬಳಕೆಗೆ ಆದ್ಯತೆ ನೀಡಿ ಎಂದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ತಾಲೂಕು ರೈತರ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಎಂ.ಎಸ್. ಪಾಟೀಲ, ಚನ್ನಬಸನಗೌಡ ಹಾವಣಗಿ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ ಮಾತನಾಡಿ, ಕೃಷಿ ಇಲಾಖೆಗೆ ರಸಗೊಬ್ಬರ ಮಾರಾಟದ ವಿಷಯದಲ್ಲಿ ಸ್ಪಷ್ಟ ನಿಲುವು ಇಲ್ಲ. ರಸಗೊಬ್ಬರದ ಜತೆಗೆ ಪೋಷಕಾಂಶಗಳನ್ನು ಲಿಂಕ್ ಮಾಡುವುದು ಕಡ್ಡಾಯ ಮಾಡಬಾರದು. ರೈತರನ್ನು ಅವಿಶ್ವಾಸದಿಂದ ನೋಡಬೇಡಿ. ವಾಮಮಾರ್ಗದಲ್ಲಿ ರಸಗೊಬ್ಬರ ಮಾರಾಟಕ್ಕೆ ಇಲಾಖೆ ತಡೆ ಒಡ್ಡಬೇಕು ಎಂದು ಒತ್ತಾಯಿಸಿದರು. ಒಂದು ಸಂದರ್ಭದಲ್ಲಿ ರೈತರು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆದು, ಅಂತಿಮವಾಗಿ ಎಂಆರ್‌ಪಿ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಬೇಕು ಎಂದು ಒತ್ತಾಯಿಸಿದರು.ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಸಂಕನಗೌಡ ದೇವಿಕೊಪ್ಪ, ಮಹೇಶ ಬಣಕಾರ, ನಾಗಣ್ಣ ಒಡೆಯರ, ಬಸವರಾಜ ಉತ್ತಂಗಿ, ಬಸವಂತಪ್ಪ ಮೆಳ್ಳಳ್ಳಿ, ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ, ತೋಟಗಾರಿಕೆ ಸಹಾಯಕ ನಿರ್ದೇಶಕ ವೀರಭದ್ರಯ್ಯ, ಸಂಗಮೇಶ ಹಕ್ಲಪ್ಪನವರ, ಶಿವಲಿಂಗಪ್ಪ ಉಪಸ್ಥಿತರಿದ್ದರು.