ಅಧಿಕಾರಿಗಳಿಂದ ರೈತರ ಜಮೀನಿಗೆ ನುಗ್ಗಿ ಒತ್ತುವರಿ

KannadaprabhaNewsNetwork | Published : Dec 10, 2024 12:32 AM

ಸಾರಾಂಶ

ಅರಣ್ಯ ಇಲಾಖೆಯ ಅಧಿಕಾರಿಗಳು ಅನಧಿಕೃತವಾಗಿ ರೈತರ ಜಮೀನುಗಳಿಗೆ ನುಗ್ಗಿ ರೈತರು ಉಳುಮೆ ಮಾಡಿದ ಬೆಳೆ ಹಾನಿಮಾಡಿ ಗುಂಡಿ ತೋಡುತ್ತಿದ್ದಾರೆ ಎಂದು ಖಂಡಿಸಿ ಸೋಮವಾರ ತಹಸೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.

ಕನ್ನಡಪ್ರಭ ವಾರ್ತೆ, ಹುಲಸೂರು

ತಾಲೂಕಿನ ಮಿರಖಲ್‌ ತಾಂಡಾದ ರೈತರಿಗೆ ಈಗಾಗಲೇ ಸರ್ಕಾರದಿಂದ ‘ಸಿ ಫಾರ್ಮ್ ’ಮಂಜೂರಾತಿ ನೀಡಲಾಗಿದೆ ಆದರೂ ಅರಣ್ಯ ಇಲಾಖೆಯ ಅಧಿಕಾರಿ ಗಳು ಅನಧಿಕೃತವಾಗಿ ರೈತರ ಜಮೀನುಗಳಿಗೆ ನುಗ್ಗಿ ರೈತರು ಉಳುಮೆ ಮಾಡಿದ ಬೆಳೆ ಹಾನಿಮಾಡಿ ಗುಂಡಿ ತೋಡುತ್ತಿದ್ದಾರೆ ಎಂದು ಖಂಡಿಸಿ ಸೋಮವಾರ ತಹಸೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.ಪ್ರತಿಭಟನಾಕಾರರು ತಹಸೀಲ್ದಾರ್‌ ಶಿವಾನಂದ ಮೇತ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿರುವ ಈ ದಬ್ಬಾಳಿಕೆ ತಡೆಯಬೇಕು, ಇದನ್ನು ಮುಂದುವರೆಸಿದರೆ ತೀವ್ರ ಹೋರಾಟ ಮಾಡುವುದಾಗಿ ಭಾರತೀಯ ದಲಿತ ಪ್ಯಾಂಥರ್ಸ್‌ ತಾಲೂಕು ಶಾಖೆಯ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಆದರೂ ಅರಣ್ಯ ಇಲಾಖೆ ಅಧಿಕಾರಿಗಳಿಂದ ರೈತರ ಜಮೀನುಗಳಿಗೆ ನುಗ್ಗಿ ಒತ್ತುವರಿ ಕಾರ್ಯ ಮುಂದುವರಿದಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿದೆ ಇರುವ ಕಾರಣ ಹೋರಾಟದ ದಾರಿ ಹಿಡಿಯುವ ಮೂಲಕ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಸಂಘಟನೆಯ ತಾಲೂಕು ಶಾಖೆ ಅಧ್ಯಕ್ಷ ಅಶೋಕ ಸಿಂಧೆ ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯವು 1978ಕ್ಕಿಂತ ಪೂರ್ವದಿಂದ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರ ಜಾಮೀನು ಸಕ್ರಮಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅದರಂತೆ ದೇಶದ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ 1996ರಲ್ಲಿ ಕೇಂದ್ರ ಸರ್ಕಾರದ ಆದೇಶದ ಅನುಸಾರ ಕರ್ನಾಟಕ ರಾಜ್ಯ ಅರಣ್ಯ ಕಾರ್ಯದರ್ಶಿಗಳು ನಡುವಳಿ ತಯಾರು ಮಾಡಿ, 1978ಕ್ಕಿಂತ ಪೂರ್ವದಿಂದ ಸಾಗುವಳಿ ಮಾಡುತ್ತಿರುವ ರೈತರ ಜಮೀನು ಸಕ್ರಮಗೊಳಿಸಬೇಕು ಆದೇಶ ನೀಡಿದೆ ಎಂದಿದ್ದಾರೆ. ಆದರೂ ನಿಯಮಗಳು ಮತ್ತು ಕಾನೂನುಗಳನ್ನು ಗಾಳಿಗೆ ತೂರಿ ಬೀದರ್‌ ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಎಲ್ಲಾ ಜಾತಿಯ ಸಣ್ಣ ಅತೀ ಸಣ್ಣ ರೈತರಿಗೆ ನೀಡಿದ ಜಾಮೀನು ಒತ್ತುವರಿ ಮಾಡುತ್ತಿರುವುದು, ತಾಲೂಕಿನ ಮಿರಖಲ್‌ ತಾಂಡಾದ ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ರೈತರು ಹತ್ತಿರ ಇದ್ದರು ಅಕ್ರಮವಾಗಿ ರೈತರ ಜಮೀನುಗಳು ಒತ್ತುವರಿ ತಡೆಯಬೇಕು ಹಾಗೂ ಬಸವಕಲ್ಯಾಣ ಆರ್‌ಎಫ್ಓ ಅಧಿಕಾರಿಯ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ಸ್ ಜಿಲ್ಲಾ ಅಧ್ಯಕ್ಷ ವೈಜನಾಥ ಸಿಂಧೆ ಆಗ್ರಹಿಸಿದರು.ತಹಸೀಲ್ದಾರ್‌ ಶಿವಾನಂದ ಮೇತ್ರೆ ಅವರು ರೈತ ಹೋರಾಟಗಾರ ಭೇಟಿ ನೀಡಿ ಅವರ ಮನವಿ ಪತ್ರ ಸ್ವೀಕರಿಸಿ ಈ ಪ್ರಕರಣ ಕುರಿತು ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಸವಕಲ್ಯಾಣ ಸಿಪಿಐ ಅಲಿಸಾಬ್‌, ಪಿಎಸ್‌ಐ ಪಂಡಿತರಾವ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.ಮನೋಹರ ಮೋರೆ, ಸಿದ್ಧಾರ್ಥ ಡಾಂಗೆ, ಸತೀಶ ಗಾಯಕವಾಡ, ದೇವಾನಂದ ಟೋಳೆ, ಲೋಕೇಶ ಕಾಂಬಳೆ, ಅಶೋಕ ಕಾಂಬಳೆ ಸೇರಿದಂತೆ ರೈತ ಮಹಿಳೆಯರು, ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Share this article