ಮಾಗಡಿ: ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಯನ್ನು ಸಕ್ರಮವಾಗಿ ನಿಭಾಯಿಸಿ ಆ.15ರಂದು ಪಟ್ಟಣದ ಕೋಟೆ ಮೈದಾನದಲ್ಲಿ ಅದ್ಧೂರಿಯಾಗಿ ಸ್ವಾತಂತ್ರ ದಿನಾಚರಣೆ ಆಚರಿಸೋಣ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಗಣ್ಯರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು. ಇದಕ್ಕೆ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಸಾರ್ವಜನಿಕರಿಂದ ಸಲಹೆ ಸೂಚನೆ ಪಡೆದು ಸನ್ಮಾನಿತರ ಪಟ್ಟಿಯನ್ನು ಸಿದ್ಧಪಡಿಸಬೇಕು. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ತಹಸೀಲ್ದಾರ್ ಶರತ್ ಕುಮಾರ್ ಮತ್ತೊಂದು ಸಭೆ ಮಾಡಿ ಅಧಿಕಾರಿಗಳ ಜೊತೆ ಚರ್ಚಿಸಬೇಕಿದೆ ಎಂದು ಶಾಸಕರು ತಿಳಿಸಿದರು.ಕಾರ್ಯಕ್ರಮದಲ್ಲಿ ಬಿಇಒ ಚಂದ್ರಶೇಖರ್, ಟಿಹೆಚ್ಒ ಚಂದ್ರಶೇಖರ್, ವಲಯ ಅರಣ್ಯ ಅಧಿಕಾರಿ ಚೈತ್ರ, ಸಾಮಾಜಿಕ ಅರಣ್ಯ ಅಧಿಕಾರಿ ಮಂಜುನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿತ್ ಅಧ್ಯಕ್ಷ ಪದ್ಮನಾಭ್, ದಲಿತ ಮುಖಂಡ ಕಲ್ಕೆರೆ ಶಿವಣ್ಣ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಗೃಹಲಕ್ಷ್ಮಿ ಹಣ ವಿಳಂಬ: ಸಿಎಂ ಜತೆ ಚರ್ಚೆ
ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲವೆಂದು ಫಲಾನುಭವಿಗಳು ದೂರುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಈ ವಿಷಯ ಕುರಿತು ಚರ್ಚಿಸಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.ಮುಡಾ ಹಾಗೂ ವಾಲ್ಮೀಕಿ ಹಗರಣಗಳ ಕುರಿತು ಬಿಜೆಪಿ ಅವರ ಪಾದಯಾತ್ರೆಗೆ ಉತ್ತರಿಸಿ, ಬಿಜೆಪಿ ಪಕ್ಷದವರು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಜೆಡಿಎಸ್‌ನವರು ಮಳೆ ಬರುತ್ತಿರುವುದರಿಂದ ಪಾದಯಾತ್ರೆ ದಿನಾಂಕವನ್ನು ಬದಲಾವಣೆ ಮಾಡಿ ಎಂದು ಹೇಳಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ಕಂಡಾಗಲೇ ನನಗೂ ಗೊತ್ತಾಗಿದ್ದು, ಪ್ರತಿಭಟನೆ ಮಾಡುವುದು ವಿರೋಧ ಪಕ್ಷದವರ ಹಕ್ಕು. ಮುಂದೆ ನೋಡೋಣ ಎಂದು ಹೇಳಿದರು.
ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆಗುತ್ತಿಲ್ಲ ಎಂಬ ದೂರಿಗೆ ಉತ್ತರಿಸಿ, ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಈ ರೀತಿ ಸಮಸ್ಯೆ ಆಗುತ್ತಿದೆ ಎಂದು ಲಿಖಿತ ದೂರು ತಹಸೀಲ್ದಾರರಿಗೆ ನೀಡಿದರೆ ಅವರು ಅಂಗಡಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಾರೆಂದು ಶಾಸಕ ಬಾಲಕೃಷ್ಣ ಹೇಳಿದರು.