ಕನ್ನಡಪ್ರಭ ವಾರ್ತೆ ರಾಮದುರ್ಗ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಭಾರಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಪರಿಣಾಮ ಜಲಾಶಯಗಳ ನೀರಿನ ಮಟ್ಟ ಹೆಚ್ಚಿ ಪ್ರವಾಹದಿಂದ ಜನ ಜಾನುವಾರಗಳಿಗೆ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ನಿರ್ದೇಶನ ನೀಡಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಮಲಪ್ರಭಾ ನದಿಗೆ ಪ್ರವಾಹದ ಮುನ್ನೆಚ್ಚರಿಕೆ ಬಗ್ಗೆ ತಾಲೂಕ ಆಡಳಿತ ಕೈಗೊಳ್ಳಬೇಕಾಗದ ಮುಂಜಾಗೃತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2019ರಲ್ಲಿ ಮಲಪ್ರಭಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿನ ಕಹಿ ನೆನಪುಗಳು ಈ ಭಾರಿ ಮಾರ್ಗದರ್ಶವಾಗಿರಲಿ. ನೋಡಲ್ ಅಧಿಕಾರಿಗಳ ನೇಮಕ ಮಾಡಿದ್ದು ಸಂಬಂಧಿಸಿದ ಅಧಿಕಾರಿಗಳು ತಕ್ಷಣದಿಂದ ಕಾರ್ಯಪ್ರವೃತ್ತರಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪೂರ್ವಸಭೆ ಮಾಡಿ ಕೈಗೊಳ್ಳಬೇಕಾದ ಕೆಲಸದ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಸಭೆಯ ನಡಾವಳಿಗಳನ್ನು ತಾಲೂಕಾ ಆಡಳಿತಕ್ಕೆ ಸಲ್ಲಿಸಬೇಕು, ವ್ಯತ್ಯಾಸವಾದರೆ ಸಂಬಂಧಿಸಿದ ನೋಡಲ್ ಅಧಿಕಾರಿ, ಎಂಜಿನಿಯರ್ ತಂಡದ ವಿರುದ್ಧ ಪ್ರಕೃತಿ ವಿಕೋಪ ನಿಯಮದಡಿ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.ಮಲಪ್ರಭಾ ನದಿ ಪಾತ್ರದ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ 33 ಗ್ರಾಮಗಳಿಗೆ ಪ್ರವಾಹದಿಂದ ತೊಂದರೆ ಸಾಧ್ಯತೆಯಿದ್ದು, ಎಲ್ಲ ಗ್ರಾಮಗಳ ಜನರಿಗೆ ಸೂಕ್ತ ಜಾಗೃತಿ ಮೂಡಿಸಬೇಕು. ಇದಕ್ಕೆ ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯ ಗ್ರಾಮ ಆಡಳಿತಾಧಿಕಾರಿ, ಪಿಡಿಒ, ಗ್ರಾಮ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ನರೇಗಾ ಎಂಜಿನಿಯರ್, ಸ್ವಸಹಾಯ ಸಂಘಗಳ ಉಸ್ತುವಾರಿ ಸಿಬ್ಬಂದಿ ಸೇರಿದಂತೆ ಎಲ್ಲರ ಸಹಕಾರ ಪಡೆಯಬೇಕು ಎಂದು ತಹಸೀಲ್ದಾರ್ ತಿಳಿಸಿದರು.ಇನ್ನು, ಪ್ರವಾಹ ಉಂಟಾದರೆ 53 ಕಾಳಜಿ ಕೇಂದ್ರ ಆರಂಭಿಸಬೇಕಿದ್ದು, ಇದಕ್ಕಾಗಿ ಅಕ್ಷರ ದಾಸೋಹದ ಸಿಬ್ಬಂದಿ ಅಡುಗೆ ಪರಿಕರ, ಅನಿಲ ಸಿಲೆಂಡರ್ ಮತ್ತು ಆಹಾರ ಸೇರಿದಂತೆ ಎಲ್ಲ ಸಿದ್ದತೆ ಮಾಡಿಕೊಳ್ಳಬೇಕು. ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗ ತಡೆಗೆ ಸಿಬ್ಬಂದಿಯನ್ನು ಔಷಧೋಪಚಾರದ ವ್ಯವಸ್ಥೆ ಮಾಡಬೇಕು ಹಾಗೂ ಪಶು ಸಂಗೋಪನಾ ಇಲಾಖೆ ಜಾನುವಾರುಗಳಿಗೆ ಅಗತ್ಯ ಮೇವು ಔಷಧಿಯನ್ನು ಒದಗಿಸಲು ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ಸೂಚನೆಗಳನ್ನು ನೀಡಿದರು.ಸಭೆಯಲ್ಲಿ ತಾಪಂ ಇಒ ಪ್ರವೀಣಕುಮಾರ ಸಾಲಿ, ತಾಲೂಕ ಆರೋಗ್ಯಾಧಿಕಾರಿ ಪ್ರವೀಣ ನಿಜಗುಲಿ, ಕ್ಷೇತ್ರಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ, ಪಶು ಸಂಗೋಪನಾ ಇಲಾಖೆಯ ಡಾ.ಗಿರೀಶ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಎಫ್.ಎಸ್.ಬೆಳವಟಗಿ ಸೇರಿದಂತೆ ಇತರರು ಇದ್ದರು.---------------ಕೋಟ್‌ಪ್ರಕೃತಿ ವಿಕೋಪದಡಿ ಪ್ರವಾಹ ನಿರ್ವಹಣೆಯ ಈ ಮುಂಜಾಗೃತಾ ಸಭೆಗೆ ಹಾಜರಾಗದ ತಾಲೂಕ ಮಟ್ಟದ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗುವುದು. ನಿರ್ಲಕ್ಷ್ಯ ಮಾಡಿದರೆ ಪ್ರಕೃತಿ ವಿಕೋಪದಡಿ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದರೂ ಸಹಿತ ತಪ್ಪಿದರೆ ಕ್ರಮಕ್ಕೆ ಅವಕಾಶವಿದೆ ಎನ್ನುವುದನ್ನು ಅಧಿಕಾರಿಗಳು ಮರೆಯಬಾರದು. ಪ್ರಕಾಶ ಹೊಳೆಪ್ಪಗೋಳ, ತಹಸೀಲ್ದಾರ್ ರಾಮದುರ್ಗ