ಪ್ರಕೃತಿ ವಿಕೋಪ ಎದುರಿಸಲು ಅಧಿಕಾರಿಗಳು ಸಿದ್ಧರಾಗಿ

KannadaprabhaNewsNetwork | Published : Jun 1, 2024 12:46 AM

ಸಾರಾಂಶ

ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ, ಬರ ಪರಿಹಾರ, ಕುಡಿಯುವ ನೀರು ಹಾಗೂ ಮುಂಗಾರು ಪೂರ್ವಸಿದ್ಧತೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಳೆಗಾಲ ಪ್ರಾರಂಭವಾಗುತ್ತಿದ್ದು, ನದಿ ತೀರದ ಪ್ರದೇಶಗಳು ಸೇರಿ ಮುಳುಗಡೆಯಾಗುವ ಪ್ರದೇಶಗಳ ಮೇಲೆ ನಿಗಾವಹಿಸಿ ಪ್ರವಾಹ, ಪ್ರಕೃತಿ ವಿಕೋಪ ಎದುರಿಸಲು ಅಧಿಕಾರಿಗಳು ಸಿದ್ಧರಾಗುವಂತೆ ಜಿಲ್ಲಾಧಿಕಾರಿ ಡಾ. ಸುಶೀಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ, ಬರ ಪರಿಹಾರ, ಕುಡಿವ ನೀರು ಹಾಗೂ ಮುಂಗಾರು ಪೂರ್ವಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡಿದರು.

ಪ್ರವಾಹ ಮುನ್ನೆಚ್ಚರಿಕೆಗೆ ಸಂಬಂಧಿಸಿದಂತೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ಮಳೆ ವರದಿ, ಪ್ರಕೃತಿ ವಿಕೋಪದಿಂದ ಉಂಟಾಗುವ ಮಾನವ, ಜಾನುವಾರು, ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಮತ್ತು ಮಳೆಗೆ ಬಿದ್ದಿರುವ ಮನೆಗಳ ವರದಿ ಪ್ರತಿದಿನ ಸಲ್ಲಿಸಬೇಕು.

ಪ್ರತಿ ಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಕಾರ್ಯದರ್ಶಿಗಳು ತಮ್ಮ ಕ್ಷೇತ್ರದಲ್ಲಿದ್ದು ಯಾವುದೇ ಅವಘಡ ಸಂಭವ ಇದ್ದಲ್ಲಿ ಆ ಕುರಿತು ಡಂಗೂರ ಬಾರಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕೆಂದು ಹೇಳಿದರು.

ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ನದಿಗಳಲ್ಲಿ ನೀರು ಏರಿಬಂದಲ್ಲಿ ನದಿ ತೀರದ ಹಳ್ಳಿಯ ಜನರ ಸಂರಕ್ಷಣೆಗೆ ಬೋಟ್‌ ಗಳ ಅವಶ್ಯಕತೆ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಹೋಮ್‌ಗಾರ್ಡ್‌ ಸಿಬ್ಬಂದಿ ಸಂಪರ್ಕದಲ್ಲಿಟ್ಟುಕೊಂಡು ಜನರ ಸಂರಕ್ಷಣೆಗೆ ನಿಲ್ಲಬೇಕು. ಆರೋಗ್ಯ ಇಲಾಖೆ ಔಷಧಿಗಳ ದಾಸ್ತಾನು ಕುರಿತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸಂಗ್ರಹದ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಎಂದರು.

ಪ್ರವಾಹದಿಂದ ಹಾಗೂ ಜಲಾಶಯ ಹಿನ್ನೀರಿನಿಂದ ಮುಳುಗಡೆಯಾಗುವ ಪ್ರದೇಶ ಗುರುತಿಸಿ ಅಲ್ಲಿ ವಾಸ ಮಾಡುವ ಜನರಿಗೆ ಮುಂಚಿತವಾಗಿ ತೆರವುಗೊಳಿಸಿ ಕ್ರಮ ಜರುಗಿಸಬೇಕು ಹಾಗೂ ಕಾಳಜಿ ಕೇಂದ್ರ ಗುರುತಿಸಿ ಅಲ್ಲಿ ಮೂಲ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದರು.

ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳನ್ನು ಪತ್ತೆ ಹಚ್ಚಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ನದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಹಲಗೆ, ಗೇಟ್‌ ತೆರವುಗೊಳಿಸಬೇಕು. ಪ್ರವಾಹ ಎದುರಿಸಲು ಅಧಿಕಾರಿಗಳು ಸಕಲ ರೀತಿಯಲ್ಲಿ ಸಜ್ಜುಗೊಂಡಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಪಂ ಸಿಇಒ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಪ್ರಕಾಶ ಕುದರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು.ಜಿಲ್ಲಾ ಕಾರ್ಯದರ್ಶಿ ಗೂಗಲ್‌ ಮೀಟ್‌ ಸಭೆ:

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅಧಿಕಾರಿಗಳೊಂದಿಗೆ ಗೂಗಲ್ ಮೀಟ್‌ ಸಭೆ ನಡೆಸಿ, ಜಿಲ್ಲೆಯಲ್ಲಿ ರೈತರಿಗೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಬರ ಪರಿಹಾರವನ್ನು ಆದ್ಯತೆ ಮೇಲೆ ಸಂಬಂಧಿಸಿದ ರೈತರಿಗೆ ವಿತರಿಸಬೇಕು. ವಿಶೇಷವಾಗಿ ಜಿಲ್ಲೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸುವ ಕುರಿತಂತೆ ಯೋಜನೆ ರೂಪಿಸಿ ರೈತರಲ್ಲಿ ಸೂಕ್ತ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.

ಮಳೆಯಿಂದ ಉಂಟಾದ ಹಾನಿಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ವರದಿ ತಯಾರಿಸಿ. ಅದರಂತೆ ಮಳೆ, ಸಿಡಿಲಿನಿಂದ ಸಾವನ್ನಪ್ಪಿದವರ ವಾರಸುದಾರರಿಗೆ ಪರಿಹಾರ ವಿತರಿಸಬೇಕು. ಮುಂದಿನ ದಿನಗಳಲ್ಲಿ ಪ್ರವಾಹಕ್ಕೆ ಸಂಬಂಧಿಸಿದಂತೆ ಎಲ್ಲಾ ಮುಂಜಾಗ್ರತೆ ಮಾಡಿಕೊಳ್ಳಲು ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Share this article