ಅಧಿಕಾರಿಗಳಿಂದ ಸೂಕ್ತ ಕ್ರಮದ ಭರವಸೆ: ರೈತರ ಅನಿರ್ದಿಷ್ಟಾವಧಿ ಧರಣಿ ಅಂತ್ಯ

KannadaprabhaNewsNetwork |  
Published : Apr 13, 2026, 01:30 AM IST
12ಕೆಎಂಎನ್ ಡಿ17 | Kannada Prabha

ಸಾರಾಂಶ

ಕೆ.ಆರ್.ಪೇಟೆ ತಾಲೂಕು ಟಿಎಪಿಸಿಎಂಎಸ್‌ನ ಗೋಡನ್‌ನಿಂದ ಎತ್ತುವಳಿಯಾಗಿ ಗವೀಮಠದ ವಸತಿ ಶಾಲೆಗೆ ಸೇರಬೇಕಾದ ಅಕ್ಕಿ ವಸತಿ ಶಾಲೆ ಸೇರುವ ಬದಲು ಪಟ್ಟಣದ ಖಾಸಗಿ ರೈಸ್ ಮಿಲ್‌ಗೆ ಹೋಗಿತ್ತು. ಅಕ್ಕಿಯನ್ನು ಲಾರಿ ಸಮೇತ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ತನಿಖೆಯಾಗಿರಲಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟುವಂತೆ ಆಗ್ರಹಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನ ಸೌಧ ಎದುರು ಗುರುವಾರದಿಂದ ಆರಂಭಿಸಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಅಧಿಕಾರಿಗಳು ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದ ಬಳಿಕ ಅಂತ್ಯಗೊಂಡಿತು.

ತಾಲೂಕಿನ ಗವೀಮಠದ ಮೊರಾರ್ಜಿ ವಸತಿ ಶಾಲೆ ಅಕ್ಕಿ ಹಗರಣ, ಶೀಳನೆರೆ ಹೋಬಳಿಯಲ್ಲಿ ಕಂದಾಯ ಇಲಾಖೆ ಆರ್.ಐ ಮತ್ತು ವಿ.ಎಗಳು ಒಗ್ಗೂಡಿ ಅಕ್ರಮವಾಗಿ ಪೌತಿ ಖಾತೆ ನೀಡಿ ರೈತರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ತಾಲೂಕು ಟಿಎಪಿಸಿಎಂಎಸ್‌ನ ಗೋಡನ್‌ನಿಂದ ಎತ್ತುವಳಿಯಾಗಿ ಗವೀಮಠದ ವಸತಿ ಶಾಲೆಗೆ ಸೇರಬೇಕಾದ ಅಕ್ಕಿ ವಸತಿ ಶಾಲೆ ಸೇರುವ ಬದಲು ಪಟ್ಟಣದ ಖಾಸಗಿ ರೈಸ್ ಮಿಲ್‌ಗೆ ಹೋಗಿತ್ತು. ಅಕ್ಕಿಯನ್ನು ಲಾರಿ ಸಮೇತ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ತನಿಖೆಯಾಗಿರಲಿಲ್ಲ.

ತಾಲೂಕಿನ ಶೀಳನೆರೆ ಹೋಬಳಿಯ ಕೆಲವು ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಆರ್.ಐ ಮತ್ತು ವಿ.ಎಗಳು ಪರಸ್ಪರ ಶಾಮೀಲಾಗಿ ನೈಜ ವಾರಸುದಾರ ಕುಟುಂಬಗಳ ಹೆಸರಿಗೆ ಮಾಡಬೇಕಾದ ಪೌತಿ ಖಾತೆಯನ್ನು ಮೃತರ ಕುಟುಂಬಕ್ಕೆ ಸಂಬಂಧವೇ ಇಲ್ಲದ ಮತ್ಯಾರದೋ ಹೆಸರಿಗೆ ಖಾತೆ ಮಾಡಿ ಬಡ ರೈತ ಕುಟುಂಬಗಳು ತಮ್ಮ ಕುಟುಂಬದ ಆಸ್ತಿ ಉಳಿಸಿಕೊಳ್ಳಲು ದಾಖಲೆ ಹಿಡಿದು ನ್ಯಾಯಾಲಯದ ಮೆಟ್ಟಿಲು ಹತ್ತುವಂತಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ದಳ್ಲಾಳಿಗಳನ್ನು ನೇಮಕ ಮಾಡಿಕೊಂಡು ಕಮೀಷನ್ ದಂಧೆಯಲ್ಲಿ ಮುಳುಗಿದ್ದಾರೆ. ಬಲಾಢ್ಯರು ಆಕ್ರಮಿಸಿಕೊಳ್ಳುತ್ತಿರುವ ಸರ್ಕಾರಿ ಆಸ್ತಿ ಸಂರಕ್ಷಣಗೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸುವವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ರೈತ ಹೋರಾಟಗಾರರು ಮಿನಿ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಮಲಗಿ ಹಗಲು ರಾತ್ರಿ ಹೋರಾಟ ಆರಂಭಿಸಿದ್ದರು.

ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಮಂಗಳ ಮತ್ತು ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕ ಪ್ರತೀಕ್ ಹೆಗ್ಗಡೆ ಹಾಗೂ ತಹಸೀಲ್ದಾರ್ ಡಾ.ಎಸ್.ಯು. ಅಶೋಕ್ ತಪ್ಪಿತಸ್ಥ ನೌಕರರ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿ ಹೋರಾಟ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಯಲ್ಲಿ ರೈತರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಮಹಿಳಾ ಘಟಕದ ರಾಜ್ಯ ಮಾಜಿ ಅಧ್ಯಕ್ಷೆ ನಂದಿನಿ ಜಯರಾಂ, ಮುಖಂಡರಾದ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಕೃಷ್ಣಾಪುರ ರಾಜಣ್ಣ, ಸಿಂಧುಘಟ್ಟ ಮುದ್ದುಕುಮಾರ್, ನಗರೂರು ಕುಮಾರ್, ಹೊನ್ನೇಗೌಡ, ಬ್ಯಾಲದಕೆರೆ ಶಿವಣ್ಣ,ಚೌಡೇನಹಳ್ಳಿ ಕೃಷ್ಣೇಗೌಡ, ನೀತಿಮಂಗಲ ಮಹೇಶ್, ಕರೋಟಿ ತಮ್ಮಯ್ಯ, ಹಿರೀಕಳಲೆ ಬಸವರಾಜು, ಲಕ್ಷ್ಮೀಪುರ ನಾಗರಾಜು, ನಾರಾಯಣಸ್ವಾಮಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದ ವಿವಿಧೆಡೆ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಕಸದ ರಾಶಿ ಹೆಚ್ಚಳ!
ಬಾಹ್ಯಾಕಾಶ ಕ್ಷೇತ್ರ ಅಧ್ಯಯನದ ಬಗ್ಗೆ ಆಸಕ್ತಿ ವಹಿಸಿ: ರಷ್ಯನ್‌ ಗಗನಯಾತ್ರಿ ಡೆವಿನ್‌ ಮಟ್ವೀವ್‌ ಕರೆ