ಕನಕಗಿರಿ: ಐತಿಹಾಸಿಕ ಕನಕಗಿರಿ ಉತ್ಸವ ೨೦೨೬ಕ್ಕೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆ ಭರದಿಂದ ಸಾಗಿವೆ. ಸೋಮವಾರ ವೇದಿಕೆ ನಿರ್ಮಾಣ, ಹೆಲಿಪ್ಯಾಡ್, ಲೈಟಿಂಗ್ ಅಳವಡಿಕೆ ಕಾರ್ಯ ಆರಂಭಿಸಿದ್ದು, ತಹಸೀಲ್ದಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು.
ಅಲ್ಲದೇ ಗ್ಯಾರಂಟಿ ಫಲಾನುಭವಿಗಳು ಹಾಗೂ ಉತ್ಸವ ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಜನರನ್ನು ಹೊತ್ತು ತರುವ ಬಸ್‌ಗಳ ನಿಲುಗಡೆ ಸ್ಥಳವನ್ನು ಪೊಲೀಸರೊಂದಿಗೆ ಅಂತಿಮಗೊಳಿಸಲಾಯಿತು. ಮುದಗಲ್ ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಮೈಸೂರು ಮಾದರಿಯಲ್ಲಿ ಲೈಟಿಂಗ್ ಅಳವಡಿಕೆಯಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಆದರೆ, ಈ ರಸ್ತೆಯಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರ ಹೆಚ್ಚಿದ್ದರಿಂದ ಇನ್ನಷ್ಟು ಎತ್ತರದಲ್ಲಿ ಅಳವಡಿಸಬೇಕು. ಸಾರ್ವಜನಿಕರ ಊಟದ ಸ್ಥಳವನ್ನು ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಹಾಗೂ ಡ್ರೋನ್ ಕಾರ್ಯಕ್ರಮಕ್ಕಾಗಿ ಆಯೋಜಕರಿಗೆ ವ್ಯವಸ್ಥೆ ಪರಿಶೀಲಿಸಿದ ಅವರು, ಹೆಲಿಪ್ಯಾಡ್, ಡ್ರೋನ್ ಕಾರ್ಯಕ್ರಮ, ಊಟದ ಸ್ಥಳಗಳಲ್ಲಿ ಸೂಕ್ತ ಬ್ಯಾರಿಕೇಡ್ ಅಳವಡಿಸಲು ತಹಸೀಲ್ದಾರರು ಸೂಚಿಸಿದರು.ಮೆರವಣಿಗೆಗಾಗಿ ಅಂಬಾರಿ ವ್ಯವಸ್ಥೆಯ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಎಡಿ ಡಾ. ಹುಲಗಪ್ಪ ಅವರಿಂದ ಮಾಹಿತಿ ಸಂಗ್ರಹಿಸಿದರು. ಹೆಲಿಪ್ಯಾಡ್, ಊಟದ ಸ್ಥಳ, ವೇದಿಕೆ, ಮೆರವಣಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮೀಣ ಕುಡಿಯುವ ನೀರಿನ ಎಇಇ ದೇವಪ್ಪ ಕಟ್ಟಿಮನಿ ಅವರಿಗೆ ತಿಳಿಸಿದರು.