ಕನ್ನಡಪ್ರಭ ವಾರ್ತೆ, ತುಮಕೂರುಎತ್ತಿನಹೊಳೆ ಯೋಜನೆಯ ಬಗ್ಗೆ ನಿರ್ಲಕ್ಷ ತೋರಿದ್ದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು, ಕೇಂದ್ರದ ನೀರಾವರಿ ಇಲಾಖೆಯ ಅಧಿಕಾರಿಗಳ ಖಡಕ್ ಎಚ್ಚರಿಕೆಗೆ ಹೆದರಿಗೆ ದೆಹಲಿಗೆ ದೌಡಾಯಿಸಿರುವುದು ಜಿಲ್ಲೆಯ ರೈತರು ಮತ್ತು ಸಾರ್ವಜನಿಕರಲ್ಲಿ ಹೊಸ ಆಶಯವನ್ನು ಹುಟ್ಟು ಹಾಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಎತ್ತಿನಹೊಳೆ ಯೋಜನೆ ಉಳಿಸಿ ಅಭಿಯಾನದ ಎರಡನೇ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಎತ್ತಿನಹೊಳೆ ಯೋಜನೆ ಬಗ್ಗೆ ಜನರ ಹೊರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರದ ಜಲಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು, ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳಿಗೆ ದೆಹಲಿಗೆ ಬರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಗಾಢ ನಿದ್ರೆಯಲ್ಲಿದ್ದ ಅಧಿಕಾರಿಗಳು ದೆಹಲಿಗೆ ದೌಡಾಯಿಸಿದ್ದಾರೆ. ನಮ್ಮ ಹೋರಾಟ ಮತ್ತಷ್ಟು ತೀವ್ರಗೊಂಡರೆ ನಿರೀಕ್ಷೆಯಂತೆ ಮುಂದಿನ ವರ್ಷ ಎತ್ತಿನ ಹೊಳೆ ನೀರು ಹರಿಯಲಿದೆ.ಹಾಗಾಗಿ ಡಸೆಂಬರ್ 18 ರ ಹೋರಾಟದಲ್ಲಿ ರೈತರು, ಕಾರ್ಮಿಕರು, ರಾಜಕೀಯ ಮುಖಂಡರುಗಳು ಸಾರ್ವಜನಿರಕು ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಕೇಂದ್ರದ ಜಲಸಂಪನ್ಮೂಲ ಸಚಿವಾಲಯ ಪ್ರಮುಖವಾಗಿ ಮೂರು ಅಕ್ಷೇಪಣೆಗಳನ್ನು ಸಲ್ಲಿಸಿದೆ.ಅದರಲ್ಲಿ ಯೋಜನೆಗೆ ಸಕಲೇಶಪುರದ ಬಳಿ ಹೆಚ್ಚುವರಿಯಾಗಿ ೧೧೦ ಹೆಕ್ಟೆರ್ ಅರಣ್ಯಭೂಮಿ ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಆದರೆ ಅಧಿಕಾರಿಗಳೇ ಹೇಳುವಂತೆ ಇಲ್ಲಿ ಬಳಕೆಯಾಗಿರುವುದು ಕೇವಲ ೦೪ ಗುಂಟೆ ಮಾತ್ರ.ಅದೇ ರೀತಿ ಯೋಜನೆಗೆ ಪರಿಸರ ಇಲಾಖೆಯ ಎನ್.ಓ.ಸಿ. ಪಡೆದಿಲ್ಲ ಎಂಬ ಅಕ್ಷೇಪಣೆ ಇದೆ. ಈಗಾಗಲೇ ಅನುಮತಿಗಾಗಿ ಹಸಿರುಪೀಠದ ಮುಂದೆ ಪ್ರಸ್ತಾವನೆ ಇದೆ. ಹೀಗಿದ್ದೂ ಅನಗತ್ಯ ಅಕ್ಷೆಪಣೆಗಳನ್ನು ಹಾಕುವ ಮೂಲಕ ಯೋಜನೆ ವಿಳಂಬ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಡಿಸೆಂಬರ್ ೧೮ ರಂದು ನಾವೆಲ್ಲರೂ ತುಮಕೂರಿನ ವಿಶ್ವೇಶ್ವರಯ್ಯ ಜಲನಿಗಮದ ಎತ್ತಿನಹೊಳೆ ಯೋಜನೆಯ ಕಚೇರಿ ಬಳಿ ಸೇರಿ,ದೆಹಲಿಗೆ ದೌಡಾಯಿಸಿದ ಅಧಿಕಾರಿಗಳಿಗೆ ಸಿಕ್ಕ ಉತ್ತರವೇನು ?,ಯೋಜನೆ ಯಾವುದೇ ಭಾದಕಗಳಿಲ್ಲದೆ ನಡೆಯುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ಅಧಿಕಾರಿಗಳಿಂದ ಉತ್ತರ ಪಡೆಯಬೇಕಿದೆ ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.ಮುಖಂಡರಾದ ಕೆಂಚಮಾರಯ್ಯ, ಡಾ.ಎಸ್.ಷಪಿಅಹಮದ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಎನ್.ಗೋವಿಂದ ರಾಜು ಅವರುಗಳು ಯೋಜನೆಗೆ ಅನಗತ್ಯ ಕಿರುಕುಳ ನೀಡುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಮಾತನಾಡಿದರು. ಈ ವೇಳೆ ಮಾಜಿ ಶಾಸಕ ಗಂಗಹನುಮಯ್ಯ,ದಲಿತ ಮುಖಂಡರಾದ ಪಿ.ಎನ್.ರಾಮಯ್ಯ,ಸುಲ್ತಾನ್ ಅಹಮದ್, ಗೋವಿಂದೇಗೌಡ, ಪಿ.ಶಿವಾಜಿ, ಸುಜಾತ,ಅರಕೆರೆ ಶಂಕರ್,ಮಹೇಶ್,ಆದಿಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.