ಸಾರ್ವಜನಿಕರಿಂದ ದೂರು ಬರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ-ಜಿಲ್ಲಾಧಿಕಾರಿ

KannadaprabhaNewsNetwork |  
Published : Jun 19, 2026, 02:15 AM IST
ಡಾ. ವಿಜಯಮಹಾಂತೇಶ ದಾನಮ್ಮನವರ | Kannada Prabha

ಸಾರಾಂಶ

ಸಾರ್ವಜನಿಕರಿಂದ ದೂರು ಬರದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಮೂಲಕ ಚುರುಕಾಗಿ ಕೆಲಸಮಾಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಸಾರ್ವಜನಿಕರಿಂದ ದೂರು ಬರದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಮೂಲಕ ಚುರುಕಾಗಿ ಕೆಲಸಮಾಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಅಧಿನಿಯಮ-2013ರನ್ವಯ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳಡಿ ವಿವಿಧ ಅಭಿವೃದ್ಧಿ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವಂತೆ ಮುಖ್ಯಮಂತ್ರಿಗಳು ಬಹಳ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ. ಹಾಗಾಗಿ ಕಚೇರಿಗೆ ಬರುವ ಸಾರ್ವಜನಿಕರ ಕುಂದು-ಕೊರತೆಯನ್ನು ಆಲಿಸಿ, ಕಾನೂನುಬದ್ಧವಾಗಿದ್ದರೆ ಮಾಡಿಕೊಡಿ, ಮಾಡಲು ಬರುವುದಿಲ್ಲವಾದಲ್ಲಿ ಅವರಿಗೆ ಮತದಟ್ಟಾಗುವಂತೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಕಚೇರಿಗೆ ಅಲೆದಾಡುವಂತೆ ಆಗಬಾರದು. ನೈಜತೆ ಪರಿಶೀಲಿಸಬೇಕು. ಅವರಿಗೂ ಕಾನೂನಿನ ಅರಿವು ಮೂಡಿದರೆ ಅವರು ಸಹ ತಿಳಿದುಕೊಳ್ಳುತ್ತಾರೆ. ಜನರಿಗೆ ನಂಬಿಕೆ ಬರುವಂತೆ ಆಡಳಿತವನ್ನು ಬಹಳ ಚುರುಕಾಗಿ ನಡೆಸಬೇಕು ಎಂದು ಅಧಿಕಾರಿಗೆ ಸೂಚನೆ ನೀಡಿದರು.ಹಾಜರಾತಿ ರಜಿಸ್ಟ್ರೇಷನ್ ಕಡ್ಡಾಯಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಆನ್‌ಲೈನ್ ರಜಿಸ್ಟ್ರೇಷನ್ ಮಾಡಬೇಕು. ಕೇಂದ್ರ ಸ್ಥಾನದಲ್ಲಿ ವಾಸವಿರಬೇಕು. ಈ ಕುರಿತು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುವ ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ತಹಸೀಲ್ದಾರಗಳು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿಗಾವಹಿಸಬೇಕು. ಸಂಸ್ಥೆಯ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆಯೋ ಇಲ್ಲವೋ ಎಂದು ಪರಿಶೀಲಿಸಬೇಕು. ಅದರಲ್ಲೂ ಗ್ರಾಮೀಣ ಮಹಿಳೆಯರು ಖಾಸಗಿ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿ ಮೋಸಹೋಗುತ್ತಿದ್ದಾರೆ. ಕೋಟ್ಯಾಂತರ ಮೊತ್ತದ ಹಗರಣಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಇಂತಹ ಖಾಸಗಿ ಸಂಸ್ಥೆಗಳ ಹಗರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಸ್.ಸಿ.ಎಸ್.ಪಿ. ಮತ್ತು ಟಿಎಸ್‌ಪಿ ಯೋಜನೆಗಳನ್ನು ಆಯಾ ಇಲಾಖೆಗಳು ಅತ್ಯಂತ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ವಿವಿಧ ಇಲಾಖೆಗಳಿಗೆ 23.81 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, 11.16 ಲಕ್ಷ ರು. ವೆಚ್ಚ ಮಾಡಲಾಗಿದೆ ಹಾಗೂ ಶೇ.46.89ರಷ್ಟು ಸಾಧನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರಗಳು, ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕೀಳರಿಮೆ ಉಂಟುಮಾಡದಂತೆ ಎಚ್ಚರ ವಹಿಸಿ
ಶರಣ ಸಾಹಿತ್ಯಕ್ಕೆ ಡಾ.ಸಿದ್ದಯ್ಯ ಪುರಾಣಿಕರ ದೊಡ್ಡ ಕೊಡುಗೆ ಅಪಾರ