ಧಾರವಾಡ: ರಾಜ್ಯ ಜನತೆಯ ಬದುಕು ಸುಧಾರಿಸಲು ಅಭಿವೃದ್ಧಿಯಲ್ಲಿ ವಿಶೇಷ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಈ ಹಿತ ಸಾಧನೆಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ ಮತ್ತು ಯುವ ನಿಧಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ಎಚ್ಚರವಹಿಸಬೇಕು. ಯಾವುದೇ ಅರ್ಹ ಫಲಾನುಭವಿ ಯೋಜನೆಗಳಿಂದ ಹೊರಗುಳಿಯದಂತೆ ಮುಂಜಾಗ್ರತೆ ವಹಿಸಬೇಕು. ಶಕ್ತಿ ಯೋಜನೆಯಡಿಯಲ್ಲಿ ಬರುವ ಸಾರಿಗೆ ಬಸ್ಸುಗಳನ್ನು ಕೋರಿಕೆಯ ನಿಲುಗಡೆ ಇದ್ದಲ್ಲಿ ಅತಿ ಹೆಚ್ಚು ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಬಸ್‌ಗಳನ್ನು ನಿಲ್ಲಿಸಬೇಕು ಎಂದರು.
ಸಮಸ್ಯೆಗಳು ಕಂಡುಬಂದಲ್ಲಿ ಸ್ವತಃ ಅಧಿಕಾರಿಗಳೇ ಹೋಗಿ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಸ್ಯೆಗೆ ಪರಿಹಾರ ನೀಡಬೇಕು. ಹಳ್ಳಿಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಸರಿಯಾಗಿ ಮಾಡಬೇಕು. ಎಲ್ಲ ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆ ಸೂಚಿಸಿದರು.ಗೃಹಲಕ್ಷ್ಮಿ ಯೋಜನೆಯಡಿ ಏಪ್ರಿಲ್ ತಿಂಗಳ ಹಣ ಮಂಜೂರು ಮಾಡಲಾಗಿದೆ. ಮೇ ತಿಂಗಳ ಹಣ ಎರಡು ದಿನಗಳಲ್ಲಿ ಜಮಾ ಆಗುತ್ತದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ, 4,11,746 ಕುಟುಂಬಗಳು ಪ್ರಯೋಜನ ಪಡೆಯುತ್ತಿದ್ದಾರೆ. ಕಳೆದ ತಿಂಗಳು ₹23.38 ಕೋಟಿ ಝೀರೋ ಬಿಲ್ಲ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಸ್ವಾಗತಿಸಿದರು. ಉಪಾಧ್ಯಕ್ಷ ಮುರಗಯ್ಯಾ ವಿರಕ್ತಮಠ, ಶಾಂತಪ್ಪ ಅಕ್ಕಿ, ರೇಹನ್ ರಝಾ ಐನಾಪೂರಿ, ರತ್ನಾ ತೇಗೂರಮಠ ಇದ್ದರು. ಪ್ರಾಧಿಕಾರದ ಸದಸ್ಯರಾದ ಅರವಿಂದ ಏಗನಗೌಡರ, ಬಸಪ್ಪ ಮಹಾಬಳೇಶ್ವರ ಬಾವಕಾರ, ಅಬ್ದುಲ್ ಗಣಿ ಅಹ್ಮದವಾಲಿ, ಅಬ್ದುಲ್ ರಸೀದ ಬೋಳಾಬಾಯಿ ಇದ್ದರು.