ಕನ್ನಡಪ್ರಭ ವಾರ್ತೆ ನಾಗಮಂಗಲ
ಕಚೇರಿ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಅಸಭ್ಯವಾಗಿ ವರ್ತಿಸದೆ ಸೌಜನ್ಯದಿಂದ ನಡೆದುಕೊಂಡು ನಿಗದಿತ ಅವಧಿಯಲ್ಲಿ ಕೆಲಸ ಮಾಡಿಕೊಡಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಪಟ್ಟಣದ ತಾಪಂ ಕಚೇರಿಗೆ ಗುರುವಾರ ಸಂಜೆ ಭೇಟಿ ಕೊಟ್ಟು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಪಂ ಪಿಡಿಒಗಳ ಸಭೆ ನಡೆಸಿ ಮಾತನಾಡಿ, ಅಧಿಕಾರಿಗಳು ಅನಾವಶ್ಯಕವಾಗಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸದೆ ತಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಗ್ರಾಪಂ ಅಥವಾ ತಾಪಂ ಮಟ್ಟದಲ್ಲಿ ಆಗುವ ಕೆಲಸಗಳನ್ನು ಇಲ್ಲಿಯೇ ಮಾಡಿಕೊಟ್ಟು ಸಮಸ್ಯೆ ಬಗೆಹರಿಸಬೇಕು. ಅನಾವಶ್ಯಕವಾಗಿ ಜನರಿಗೆ ಜಿಪಂ ಕಚೇರಿಯತ್ತ ಹೋಗುವಂತೆ ಕೈತೋರಿಸಬಾರದು ಎಂದರು.ಆರ್ಥಿಕ ವರ್ಷ ಅಂತ್ಯದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು. ಬಂದಿರುವ ಹಣ ಮತ್ತೆ ಸರ್ಕಾರಕ್ಕೆ ವಾಪಸ್ ಹೋಗದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದರೆ ಪ್ರಗತಿಯ ಗುರಿ ಸಾಧಿಸಬಹುದು. ಆ ನಿಟ್ಟಿನಲ್ಲಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ಮುಂದಿನ ಆರ್ಥಿಕ ವರ್ಷಕ್ಕೆ ಅಗತ್ಯವಿರುವ ಅನುದಾನಕ್ಕೆ ಬೇಡಿಕೆ ಸಲ್ಲಿಸಲು ಕ್ರಿಯಾ ಯೋಜನೆ ರೂಪಿಸಬೇಕು ಎಂದರು.
ಅನುಷ್ಠಾನಗೊಂಡಿರುವ ಜೆಜೆಎಂ ಯೋಜನೆಯಡಿ ಗ್ರಾಮೀಣ ಜನರಿಗೆ ಕುಡಿಯುವ ನೀರು ಪೂರೈಸಬೇಕು. ಪೈಪ್‌ಲೈನ್ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಿ ಜನರ ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.ಹಳ್ಳಿಗಳಲ್ಲಿ ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಟ್ಟು ನೈಸರ್ಗಿಕ ಸಂರಕ್ಷಣೆಗೆ ಪೂರಕವಾಗಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ತಮ್ಮ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆ, ಅಂಗನವಾಡಿ ಮತ್ತು ಹಾಸ್ಟೆಲ್‌ಗಳಿಗೆ ಅಧಿಕಾರಿಗಳು ಆಗಾಗ್ಗೆ ಭೇಟಿ ಕೊಟ್ಟು ಶೌಚಾಲಯ, ತರಗತಿ ಕೊಠಡಿ ಹಾಗೂ ಅಡುಗೆ ಮನೆ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ಊಟ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮಕ್ಕಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಗಮನಹರಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಸಮುದಾಯ ಮತ್ತು ವೈಯುಕ್ತಿಕ ಕಾಮಗಾರಿಗಳಿಗೆ ಆದ್ಯತೆ ಕೊಡುವ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲ ರೀತಿಯ ಸಿದ್ಧತೆ ನಡೆಸಿರುವುದು ತಿಳಿದುಬಂದಿದೆ. ಈ ಬಾರಿ ಶೇ.100ರಷ್ಟು ಫಲಿತಾಂಶ ತರಲು ಕ್ರಮ ವಹಿಸಬೇಕು ಎಂದರು.
ಈ ವೇಳೆ ತಾಪಂ ಇಒ ಸತೀಶ್, ಸಹಾಯಕ ನಿರ್ದೇಶಕರಾದ ಮೇನಕಾ, ವಿ.ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಎಲ್ಲಾ ಗ್ರಾಪಂ ಪಿಡಿಒಗಳು ಇದ್ದರು.