ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಕಾರಟಗಿ ಪುರಸಭೆ ವಿರುದ್ಧ ಆಕ್ರೋಶ
ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಹಾಕುತ್ತಿದ್ದ ಪುರಸಭೆಯ ತ್ಯಾಜ್ಯ ವಿಲೇವಾರಿ ಗಾಡಿಗಳನ್ನು ನಿಲ್ಲಿಸಿ, ಅವುಗಳನ್ನು ಹಿಂದಕ್ಕೆ ಕಳುಹಿಸಿ ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ೧೩ನೇ ವಾರ್ಡ್‌ನ ಸಂತೆ ಮಾರುಕಟ್ಟೆಯ ಹಿಂದುಗಡೆಯ ಸಾರಿಗೆ ಸಂಸ್ಥೆಗೆ ಸೇರಿದ ಜಮೀನಿನಲ್ಲಿ ಪುರಸಭೆ ತ್ಯಾಜ್ಯ ಸಂಗ್ರಹಿಸುತ್ತಿದೆ. ಇದರಿಂದ ಸುತ್ತಲ ಪರಿಸರ ಮಲಿನಗೊಂಡು ದುರ್ವಾಸನೆ ಮತ್ತು ಹೊಗೆ ಎದ್ದು ನಿವಾಸಿಗಳಿಗೆ ಉಸಿರಾಡುವುದಕ್ಕೆ ಸಂಕಷ್ಟ ತಂದೊಡ್ಡಿದೆ.ಈ ಬಗ್ಗೆ ಸ್ಥಳೀಯ ನಿವಾಸಿಗಳು, ಪಕ್ಕದ ಗುರು ಭವನದ ಶಿಕ್ಷಕರು, ಪೊಲೀಸ್ ವಸತಿಗೃಹದಲ್ಲಿ ವಾಸಿಸುವವರು, ಸಿದ್ದೇಶ್ವರ ಬಯಲು ರಂಗಮಂದಿರದ ಮುಂದಿನ ಮೈದಾನದಲ್ಲಿ ಬೆಳಗ್ಗೆ ವಾಯು ವಿಹಾರ ಬರುವವರು ಪುರಸಭೆಗೆ ದೂರು ನೀಡಿದ್ದರು. ಆದರೆ ಪುರಸಭೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿಗೆ ಸ್ಥಳವೇ ಇಲ್ಲ ಎನ್ನುವ ಸಬೂಬು ಹೇಳುತ್ತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಅವರನ್ನು ಪ್ರತಿಭಟನೆ ನಡೆಸುತ್ತಿದ್ದವರು ತರಾಟೆಗೆ ತೆಗೆದುಕೊಂಡರು. ಕೊನೆಗೆ ಮುಖ್ಯಾಧಿಕಾರಿ ಈ ಸ್ಥಳದಲ್ಲಿ ತ್ಯಾಜ್ಯ ಹಾಕುವುದನ್ನು ತಕ್ಷಣದಿಂದ ಸ್ಥಗಿತಗೊಳಿಸುವುದಾಗಿ ಹೇಳಿದರು.ಯರಡೋಣಾ ಗ್ರಾಮದ ಬಳಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಅಲ್ಲಿ ಘಟಕ ನಿರ್ಮಾಣವಾಗಲಿದೆ. ಅನಂತರ ಕಾರಟಗಿ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ನೀಗಲಿದೆ ಎಂದರು.
ಈ ವೇಳೆ ನಾಮನಿರ್ದೇಶಿತ ಸದಸ್ಯ ವೀರೇಶ ಗದ್ದಿ ಮುದುಗಲ್, ಹನುಮಂತಪ್ಪ ಮೂಲಿಮನಿ, ಶರಣಯ್ಯಸ್ವಾಮಿ ಖಾನಾವಳಿ, ಸುನೀಲ್ ಮೂಲಿಮನಿ, ಮಂಜುನಾಥ ನಾಯಕ, ವೀರೇಶ ಯಾದಗಿರಿ, ಹೀರಾಲಾಲ್ ಸಿಂಗ್, ರವಿಕುಮಾರ ಕೋಟೆ, ದಿನೇಶ ಶೇಟ್, ತಿರುಪತಿ ಸಿಂಗ್, ಮಂಜುನಾಥ ಇನ್ನಿತರರು ಇದ್ದರು.