ಸಂಡೂರು: ಪ್ರತಿನಿತ್ಯ ಹಲವರು ಒಂದಿಲ್ಲೊಂದು ಪ್ರಕರಣದಲ್ಲಿ ನೊಂದು ಠಾಣೆಗೆ ಬರುತ್ತಾರೆ. ಹೀಗೆ ನೊಂದು ಬಂದವರೊಂದಿಗೆ ಅತ್ಯಂತ ಸೌಜನ್ಯದಿಂದ ವರ್ತಿಸಬೇಕು. ಜನಸ್ನೇಹಿಯಾಗಿ ಕೆಲಸ ಮಾಡಿ ಎಂದು ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಕುಮಾರ್ ಬಿ.ಎಸ್. ಹೇಳಿದರು.
ವಿಜಯನಗರ ಜಿಲ್ಲೆಯ ಎಸ್ಪಿ ಶ್ರೀಹರಿಬಾಬು ಬಿ.ಎಲ್. ಮಾತನಾಡಿ, ಇಂದಿನ ಧಾವಂತದ, ಯಾಂತ್ರಿಕ ಬದುಕಿನಲ್ಲಿ ಸ್ನೇಹ, ಪ್ರೀತಿ, ಸಂಬಂಧ ಮುಂತಾದ ಮೌಲ್ಯಗಳು ತಮ್ಮ ಅರ್ಥ ಮತ್ತು ಮಹತ್ವ ಪಡೆದುಕೊಳ್ಳುತ್ತಿವೆ. ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಿಮ್ಮಲ್ಲಿಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುತ್ತದೆ. ಈ ಅನುಬಂಧ ಹೀಗೆ ಇರಲಿ ಎಂದರು.
ಬಳ್ಳಾರಿ ಜಿಲ್ಲಾ ಎಸ್ಪಿ ಡಾ. ಶೋಭಾರಾಣಿ ವಿ.ಜೆ. ಮಾತನಾಡಿ, ೨೦೦೫ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಗಳ ಕರ್ತವ್ಯನಿಷ್ಠೆ ಶ್ಲಾಘನೀಯ. ನಿಮ್ಮ ಕೊಡುಗೆ ಇಲಾಖೆಗೆ ಭವಿಷ್ಯದಲ್ಲಿಯೂ ಹೀಗೆ ಇರಲಿ. ಕರ್ತವ್ಯದ ಜತೆಗೆ ನಿಮ್ಮ ವೈಯಕ್ತಿಕ, ಕೌಟುಂಬಿಕ ಜೀವನದಲ್ಲಿ ಇದೇ ರೀತಿಯ ಯಶಸ್ಸನ್ನು ಸಾಧಿಸಿ ಎಂದು ಶುಭಹಾರೈಸಿದರು.೨೦೦೫ನೇ ಬ್ಯಾಚ್‌ನಲ್ಲಿ ಸೇವೆಗೆ ಸೇರಿ ನಂತರದಲ್ಲಿ ಅಗಲಿದ ಸಹೋದ್ಯೋಗಿಗಳ ಸೇವೆಯನ್ನು ಸ್ಮರಿಸಿ, ಅವರಿಗೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ನಡೆಸಲಾಯಿತು. ೨೦೦೫ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಚಂದ್ರಶೇಖರ, ಶಿವಲೀಲಾ, ಬೊಮ್ಮನಗೌಡ, ರಾಜೇಂದ್ರಪ್ರಸಾದ, ಲಕ್ಷ್ಮಣನಾಯ್ಕ್, ರಾಜೇಶ್ವರಿ, ಕೆ. ಹನುಮಂತ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ನಾಗರಾಜ ಕೊಟ್ರಪ್ಪನವರ್ ಕಾರ್ಯಕ್ರಮ ನಿರೂಪಿಸಿದರು. ಬಸವಕುಮಾರ್ ಸ್ವಾಗತಿಸಿದರು. ಸ್ವರೂಪ್ ಕೊಟ್ಟೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಮಾ, ಮಂಜುಳಾ ಪ್ರಾರ್ಥಿಸಿದರು. ವಿಶ್ವನಾಥ ವಂದಿಸಿದರು.