ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೊಡಗು ಜಿಲ್ಲಾಡಳಿತ ಇವರ ಸಹಯೋಗದೊಂದಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಶನಿವಾರ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಭೂ ಕಬಳಿಕೆ ನಿರಂತರವಾಗಿ ನಡೆದಿದ್ದು, ಭೂ ಕಬಳಿಕೆ ಆಗದಂತೆ ತಡೆಯುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುವುದು ಅಥವಾ ಭೂಕಬಳಿಕೆ ಆಗದಂತೆ ಗಮನಹರಿಸುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಕುರುಕ್ಷೇತ್ರ ನಡೆದಿರುವುದೇ ಭೂಮಿಗಾಗಿ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಅನಾದಿಕಾಲದಿಂದಲೂ ನೀರು, ಭೂಮಿಗಾಗಿ ಯುದ್ಧಗಳೇ ನಡೆದಿವೆ. ಆದ್ದರಿಂದ ಸರ್ಕಾರಿ ಭೂಮಿ ಸಂರಕ್ಷಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೊಸಮನಿ ಪುಂಡಲೀಕ ಅವರು ಮಾತನಾಡಿ ಕಾನೂನಿನಲ್ಲಿ ಎರಡು ರೀತಿ ಇದ್ದು, ಒಂದು ಮನುಷ್ಯ ಮಾಡಿದ ಕಾನೂನು, ಇನ್ನೊಂದು ಪ್ರಕೃತಿದತ್ತವಾದ ನಿಯಮಗಳಿದ್ದು, ಸಂವಿಧಾನದ ನಿಯಮಗಳು ಒಂದು ವ್ಯವಸ್ಥೆಯಲ್ಲಿ ಕಾನೂನು ಆಗಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸುವುದು ಅತ್ಯಗತ್ಯವಾಗಿದೆ ಎಂದರು.
ಶಾಲಾ-ಕಾಲೇಜು, ಆಸ್ಪತ್ರೆ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳು, ಪೊಲೀಸ್ ಠಾಣೆ ಹೀಗೆ ಪ್ರತಿಯೊಂದಕ್ಕೂ ಸಹ ಜಮೀನು ಬೇಕಿದ್ದು, ಇರುವ ಅಲ್ಪಸ್ವಲ್ಪ ಜಮೀನನ್ನಾದರೂ ಉಳಿಸಬೇಕಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡುವುದು ಎಷ್ಟೋ ಕಡೆ ಕಂಡುಬರುತ್ತಿದೆ. ಮಳೆ ಬಂದಾಗ ಪರಿತಪಿಸುತ್ತಾರೆ. ಆದ್ದರಿಂದ ಕರ್ನಾಟಕ ಕೆರೆ ಸಂರಕ್ಷಣಾ ಕಾಯ್ದೆಯಂತೆ ಕೆರೆ, ಕಟ್ಟೆ, ಕಾಲುವೆಗಳನ್ನು ಉಳಿಸಬೇಕು. ಇದರಿಂದ ಜಲ ಸಂರಕ್ಷಣೆ ಸಾಧ್ಯವಾಗಲಿದೆ ಎಂದರು.
ನಗರಸಭೆ ಕಂದಾಯ ಅಧಿಕಾರಿ ಎಂ.ಎ.ತಾಹಿರ್ ಮಾತನಾಡಿ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ರಸ್ತೆ, ಮಾರುಕಟ್ಟೆ, ಉದ್ಯಾನವನ, ಆಸ್ತಿಪಾಸ್ತಿ ರಕ್ಷಣೆ ಒತ್ತುವರಿ ಕಂಡು ಬರುತ್ತಿದೆ. ಅದನ್ನು ತಡೆಯುವಲ್ಲಿ ಸ್ಥಳೀಯ ಸಂಸ್ಥೆಗಳು ಮುಂದಾಗುತ್ತಿವೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಭಾಸ್ಕರ್, ಜಗನ್ನಾಥ್, ತಹಸೀಲ್ದಾರರಾದ ಪ್ರವೀಣ್ ಕುಮಾರ್, ಇತರರು ಇದ್ದರು. ಉಮೇಶ್ ಅವರು ನಿರೂಪಿಸಿದರು.