ಹಾನಗಲ್ಲ: ಬಾಳಂಬೀಡ ಹಾಗೂ ಹಿರೇಕಾಂಶಿ ಸೇರಿದಂತೆ ನಾನಾ ಏತ ನೀರಾವರಿ ಯೋಜನೆಗಳ ಮೂಲಕ ಕೆರೆ, ಕಟ್ಟೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಕಾಳಜಿ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ, ಬೇಜಬಾಬ್ದಾರಿ ಸಲ್ಲದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ತಾಕೀತು ಮಾಡಿದರು.
ಕೆರೆ, ಕಟ್ಟೆಗಳಿಗೆ ನೀರು ಹರಿಯುತ್ತಿರುವುದನ್ನು ನಿರಂತರವಾಗಿ ಪರಿಶೀಲಿಸಬೇಕು. ಉಳಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಈ ವಿಷಯದಲ್ಲಿ ಸಮನ್ವಯ ಸಾಧಿಸಬೇಕು. ಏತ ನೀರಾವರಿ ಯೋಜನೆಗಳನ್ನು ಬಳಸಿಕೊಂಡು ಕೆರೆ, ಕಟ್ಟೆ ತುಂಬಿಸಿದರೆ ಅಂತರ್ಜಲ ಮರುಪೂರಣವಾಗಿ ಕೃಷಿ ಚಟುವಟಿಕೆ, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದರು.
ಧರ್ಮಾ ನದಿಯ ನೀರಿನ ಹರಿವಿನ ಬಗ್ಗೆ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಮಾನೆ, ಪ್ರಸ್ತುತ ಕುಡಿಯುವ ನೀರಿಗೆ ಯಾವುದೇ ತೊಂದರೆವಾಗದಂತೆ ಕ್ರಮವಹಿಸಬೇಕು. ಹಾಗೆಯೇ ಮುಂದಿನ ದಿನಗಳಲ್ಲಿ ನೀರಿನ ಹರಿವು ಹೆಚ್ಚಾದರೆ, ಕಾಲುವೆಗೆ ಹರಿಸಲು ಪೂರ್ವಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.ನಿಗಮದ ಎಇಇ ಗಿರೀಶ್, ಸಹಾಯಕ ಅಭಿಯಂತರ ರಾಕೇಶ ಇದ್ದರು.