ಕನ್ನಡಪ್ರಭ ವರದಿ ಪರಿಣಾಮ, ಮುಖ್ಯಮಂತ್ರಿ ಅವರಿಂದ ಸೂಚನೆ

ಕನ್ನಡಪ್ರಭ ವಾರ್ತೆ ಕಾರವಾರಕಾರವಾರ ಕಾಜುಬಾಗ ರಸ್ತೆಯನ್ನು ಬೇಕಾಬಿಟ್ಟಿಯಾಗಿ ಅಗೆದ ನಗರಸಭೆ ಕಾಮಗಾರಿ ಅವಾಂತರ ಜೀಪು ಸಿಲುಕಿ ಚಾಲಕನ ಪರದಾಟ ಎಂಬ ಕನ್ನಡಪ್ರಭ ವರದಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಹಿನ್ನೆಲೆ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ವೈಷ್ಣವಿ ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.ಈ ವಿಷಯದ ಬಗ್ಗೆ ಆದ್ಯತೆಯ ಮೇರೆಗೆ ನಿಯಮಾನುಸಾರ ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಅತಿ ಶೀಘ್ರದಲ್ಲಿ ಕಳುಹಿಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ. ಈ ಕಾಮಗಾರಿಯನ್ನು ಅಮೃತ 2.0 ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ನಡೆಸುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ಇಲಾಖೆಯವರಿಗೆ ತಿಳಿಸಿದ್ದು ಅದನ್ನು ಸರಿಪಡಿಸಲಾಗಿದೆ ಎಂಬ ವರದಿಯನ್ನು ಪೌರಾಯುಕ್ತರು ನೀಡಿದ್ದಾಗಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮುಖ್ಯಮಂತ್ರಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.ಕಾರವಾರ ನಗರಸಭೆಯ ಕಾಮಗಾರಿಯಿಂದಾಗಿ ನಗರದಲ್ಲಿ ರಸ್ತೆಗಳು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ. ಪದವಿ ಕಾಲೇಜು ಬಳಿ ಜೀಪ್ ಹೂತುಹೋಗಿ ಹೊರತೆಗೆಯಲು ಹರಸಾಹಸ ಮಾಡಬೇಕಾಯಿತು. ಪೈಪ್ ಲೈನ್ ಅಳವಡಿಸಲು ಸುಸಜ್ಜಿತ ರಸ್ತೆಯನ್ನು ಆಗೆಯಲಾಗಿದೆ ಎಂದು ನಗರಸಭೆಯ ಕಾಮಗಾರಿ ಅವಾಂತರ ಜೀಪು ಸಿಲುಕಿ ಚಾಲಕನ ಪರದಾಟ ಶಿರೋನಾಮೆಯಡಿ ಕನ್ನಡಪ್ರಭ ಜು.1 ರಂದು ವರದಿ ಪ್ರಕಟಿಸಿತ್ತು.