ಹಾನಗಲ್ಲ: ಬಾಳಂಬೀಡ ಹಾಗೂ ಹಿರೇಕಾಂಶಿ ಸೇರಿದಂತೆ ನಾನಾ ಏತ ನೀರಾವರಿ ಯೋಜನೆಗಳ ಮೂಲಕ ಕೆರೆ, ಕಟ್ಟೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಕಾಳಜಿ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ, ಬೇಜಬಾಬ್ದಾರಿ ಸಲ್ಲದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ತಾಕೀತು ಮಾಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಳೆಯ ಅಭಾವದ ಹಿನ್ನೆಲೆಯಲ್ಲಿ ರೈತ ಸಮೂಹದಲ್ಲಿ ಆತಂಕ ಮನೆ ಮಾಡಿದೆ. ಕೆರೆ, ಕಟ್ಟೆಗಳಲ್ಲಿ ನೀರಿನ ಸಂಗ್ರಹವಿಲ್ಲದೇ ಸಮಸ್ಯೆ ತಲೆದೋರಿದೆ. ವರದಾ ನದಿಯಲ್ಲಿ ನೀರಿನ ಹರಿವು ಆಧರಿಸಿ ಕೆರೆ, ಕಟ್ಟೆಗಳನ್ನು ತುಂಬಿಸಲು ಗಮನ ನೀಡಬೇಕು. ನೀರು ಮತ್ತು ಸಮಯ ವ್ಯರ್ಥ ಮಾಡದೇ ಕಳಕಳಿ ಪ್ರದರ್ಶಿಸಬೇಕು ಎಂದರು.

ಕೆರೆ, ಕಟ್ಟೆಗಳಿಗೆ ನೀರು ಹರಿಯುತ್ತಿರುವುದನ್ನು ನಿರಂತರವಾಗಿ ಪರಿಶೀಲಿಸಬೇಕು. ಉಳಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಈ ವಿಷಯದಲ್ಲಿ ಸಮನ್ವಯ ಸಾಧಿಸಬೇಕು. ಏತ ನೀರಾವರಿ ಯೋಜನೆಗಳನ್ನು ಬಳಸಿಕೊಂಡು ಕೆರೆ, ಕಟ್ಟೆ ತುಂಬಿಸಿದರೆ ಅಂತರ್ಜಲ ಮರುಪೂರಣವಾಗಿ ಕೃಷಿ ಚಟುವಟಿಕೆ, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದರು.

ಧರ್ಮಾ ನದಿಯ ನೀರಿನ ಹರಿವಿನ ಬಗ್ಗೆ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಮಾನೆ, ಪ್ರಸ್ತುತ ಕುಡಿಯುವ ನೀರಿಗೆ ಯಾವುದೇ ತೊಂದರೆವಾಗದಂತೆ ಕ್ರಮವಹಿಸಬೇಕು. ಹಾಗೆಯೇ ಮುಂದಿನ ದಿನಗಳಲ್ಲಿ ನೀರಿನ ಹರಿವು ಹೆಚ್ಚಾದರೆ, ಕಾಲುವೆಗೆ ಹರಿಸಲು ಪೂರ್ವಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.

ನಿಗಮದ ಎಇಇ ಗಿರೀಶ್, ಸಹಾಯಕ ಅಭಿಯಂತರ ರಾಕೇಶ ಇದ್ದರು.