ಕೊಪ್ಪಳ: ಜಿಲ್ಲೆಯಲ್ಲಿ ಜೂನ್ ಹಾಗೂ ಜುಲೈ ತಿಂಗಳು ಮುಗಿಯುತ್ತ ಬಂದರೂ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಬರ ಸಮೀಕ್ಷೆ ನಡೆಸಿ ಸರಕಾರ, ವಿಶೇಷ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್ ಆಗ್ರಹಿಸಿದ್ದಾರೆ.
ತಾಲೂಕಿನ ಅಳವಂಡಿ ಸಮೀಪದ ಮೂರ್ಲಾಪುರ ಗ್ರಾಮ ಸೇರಿದಂತೆ ವಿವಿಧ ಪ್ರದೇಶಗಳಿಗೆ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿ ಬರಗಾಲ ಸ್ಥಿತಿ ಪರಿಶೀಲಿಸಿದ ನಂತರ ಮಾತನಾಡಿದರು.ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಒಣಗಿ ಹೋಗಿರುವುದರಿಂದ ರೈತರು ತಾವೇ ಟ್ರ್ಯಾಕ್ಟರ್ ಮೂಲಕ ಬೆಳೆಗಳನ್ನು ಹರಗಿ ನಾಶಪಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮೂರ್ಲಾಪುರದ ರೈತರೊಬ್ಬರು ತಮ್ಮ ಐದು ಎಕರೆ ಸೂರ್ಯಕಾಂತಿ ಬೆಳೆಯನ್ನು ನಾಶಪಡಿಸಿರುವ ಘಟನೆ ದುಃಖಕರವಾಗಿದ್ದು, ಇದೇ ಪರಿಸ್ಥಿತಿ ಅನೇಕ ಗ್ರಾಮಗಳ ರೈತರಿಗೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯು ಬಹುತೇಕ ಕೃಷಿ ಮಳೆಯನ್ನೇ ಅವಲಂಭಿಸಿದ್ದು, ನೀರಾವರಿ ಪ್ರದೇಶಗಳಿಗೂ ತುಂಗಭದ್ರಾ ಅಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಹರಿಸದಿರುವುದರಿಂದ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಮೆಕ್ಕೆಜೋಳ, ಹತ್ತಿ, ಉದ್ದು, ಹೆಸರು ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರಕ್ಕೂ ಅಧಿಕ ನಷ್ಟವಾಗಿದೆ. ರಾಜ್ಯ ಸರಕಾರ ಇನ್ನೂ ಬರ ಸಮೀಕ್ಷೆ ಆರಂಭಿಸದಿರುವುದು ಹಾಗೂ ಕೃಷಿ ಇಲಾಖೆಯ ನೇತೃತ್ವದ ವಿಚಾರದಲ್ಲಿ ವಿಳಂಬವಾಗಿರುವುದು ರೈತರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.ತಕ್ಷಣ ಅಧಿಕಾರಿಗಳ ಮೂಲಕ ಬರ ಸಮೀಕ್ಷೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಸಹಕಾರಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಕೃಷಿ ಸಾಲದ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸಬೇಕು. ರೈತರು ಮತ್ತು ಜಾನುವಾರುಗಳ ಹಿತದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟಿನಿಂದ ಕಾಲುವೆಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ನಂತರ ಬಿಜೆಪಿ ತಂಡ ಕ್ಷೇತ್ರಾದ್ಯಂತ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳಿಗೆ ವಿಸ್ತೃತ ವರದಿ ಸಲ್ಲಿಸುವುದಾಗಿ ತಿಳಿಸಿತು.
ಬಿಜೆಪಿ ಮುಖಂಡ ಮಹಾಂತೇಶ ಪಾಟೀಲ ಮೈನಹಳ್ಳಿ, ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ ಸಜ್ಜನ್, ಮುಖಂಡ ವೆಂಕಟೇಶ ಹಾಲವರ್ತಿ, ಶ್ರೀನಿವಾಸ್ ಕಲಾದಗಿ, ಹನುಮಂತಪ್ಪ ಉಂಕಿ, ಬಸಣ್ಣ ಮುರ್ಲಾಪುರ್, ಅಂದಾನಗೌಡ ಪಾಟೀಲ್, ಸುರೇಶ ಚನ್ನಹಳ್ಳಿ, ಸಿದ್ದಪ್ಪ ಡಂಬಲ್, ಬಸಣ್ಣ ಸಂಗ ರೆಡ್ಡಿ ಇತರರಿದ್ದರು.