ಗದಗ: ಜಿಲ್ಲೆಯ ಕಣವಿ ಹೊಸೂರು ಗ್ರಾಮದ ಹೊರವಲಯದಲ್ಲಿರುವ ಪವನ ವಿದ್ಯುತ್ ಸ್ಥಾವರದಲ್ಲಿದ್ದ ಗಾಳಿ ವಿದ್ಯುತ್ ಉತ್ಪಾದನಾ ಯಂತ್ರ(ವಿಂಡ್ ಟರ್ಬೈನ್) ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ತಾಂತ್ರಿಕ ದೋಷವೇ ಬೆಂಕಿಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಟರ್ಬೈನ್‌ನ ಮೇಲ್ಭಾಗದಿಂದ ದಟ್ಟ ಹೊಗೆ ಹಾಗೂ ಜ್ವಾಲೆಗಳು ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿಸಿದ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ ನಂತರ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹಲವು ಗಂಟೆಗಳ ಪ್ರಯತ್ನದ ನಂತರ ಬೆಂಕಿ ನಂದಿಸಿದರು.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಟರ್ಬೈನ್‌ನ ಪ್ರಮುಖ ಉಪಕರಣಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರುಪಾಯಿ ಮೌಲ್ಯದ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನು ಎಂಬುದನ್ನು ತಾಂತ್ರಿಕ ತಜ್ಞರು ಪರಿಶೀಲಿಸುತ್ತಿದ್ದು, ಸಮಗ್ರ ತನಿಖೆಯ ನಂತರವೇ ಸ್ಪಷ್ಟ ಮಾಹಿತಿ ದೊರೆಯಲಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲಿಕಾರ್ಜುನ ಮೂರ್ತಿ ಮೆರವಣಿಗೆ

ನರಗುಂದ: ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಸೋಮವಾರ ನೂತನ ಮಲ್ಲಿಕಾರ್ಜುನ ದೇವಸ್ಥಾನದ ಚಾವಣಿ ಹಾಕಿದ ನಿಮಿತ್ತ ಊರಿನ ಮಹಿಳೆಯರು ಸೇರಿ ಬುತ್ತಿ ಹಂಚುವ ಕಾರ್ಯಕ್ರಮ ಮಾಡಿದರು.ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಚಕ್ಕಡಿಯಲ್ಲಿ ಮಲ್ಲಿಕಾರ್ಜುನ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿದರು. ವಿರಕ್ತಮಠದ ಡಾ. ಚನ್ನವೀರೇಶ್ವರ ಶ್ರೀಗಳು, ಗ್ರಾಮದ ಗುರು ಹಿರಿಯುರು, ಕಲಾ ತಂಡಗಳ ಪದಾಧಿಕಾರಿಗಳು ಇದ್ದರು.