ಹಾವೇರಿ:ರೈತರ ಹಬ್ಬ ಎಂದೇ ಕರೆಯುವ ಮುಂಗಾರು ಹಂಗಾಮಿನ ಮೊದಲ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆಯನ್ನು ಮಂಗಳವಾರ ಜಿಲ್ಲಾದ್ಯಂತ ರೈತರು ಮಣ್ಣೆತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಆಚರಿಸಿದರು.

ಬೆಳಗ್ಗೆ ಹೊಲ ಹಾಗೂ ಹುತ್ತದ ಮಣ್ಣು ತಂದು ಎತ್ತಿನ ಮೂರ್ತಿ ತಯಾರಿಸಿ ಅವುಗಳಿಗೆ ಸುಣ್ಣಬಣ್ಣ ಬಳಿದು ಸಿಂಗರಿಸಿ ದೇವರ ಮನೆಯಲ್ಲಿಟ್ಟು ಪೂಜಿಸಿದರು. ಮಕ್ಕಳು ಸಹ ಮಣ್ಣಿನಿಂದ ಎತ್ತಿನ ಮೂರ್ತಿಗಳನ್ನು ತಯಾರಿಸಿ ಸಂತಸ ಪಟ್ಟರು. ರೈತನ ಹೆಗಲಿಗೆ ಜತೆಯಾಗಿ ಕುಟುಂಬದ ಸದಸ್ಯನಾಗಿ ಬಾಳುವ ಎತ್ತುಗಳಿಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಲಾಯಿತು.

ಮಹಿಳೆಯರು ಮನೆ ದೇವರ ಜಗಲಿ ಮೇಲೆ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡಿ ವಿವಿಧ ಬಗೆಯ ಬೆಲ್ಲದ ಹೂರಣದ ಕರಿಗಡುಬು, ಬೆಲ್ಲದಬ್ಯಾಳಿ, ಚಪಾತಿ, ಸೆಂಡಿಗೆ, ಬದನೆಕಾಯಿ ಪಲ್ಲೆ ಸೇರಿದಂತೆ ವಿವಿಧ ನೇವೈದ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಟುಂಬದ ಸದಸ್ಯರೆಲ್ಲೂ ಒಟ್ಟಾಗಿ ಕುಳಿತು ಭೋಜನ ಸವಿಯುವ ಮೂಲಕ ಮಣ್ಣೆತ್ತಿನ ಅಮವಾಸ್ಯೆಯನ್ನು ಆಚರಿಸಿದರು.

ನಗರ ಪ್ರದೇಶದಲ್ಲೂ ಜನರು ಮಣ್ಣಿನ ಬಸವಣ್ಣ ಮೂರ್ತಿ ಖರೀದಿಸಿ ಮನೆಗೆ ತಂದು ಪೂಜಿಸಿದರು. ಬುಧವಾರ ಮಣ್ಣಿನ ಮೂರ್ತಿಗಳನ್ನು ಸುತ್ತಮುತ್ತಲಿನ ಕೆರೆ ಅಥವಾ ಬಾವಿಗಳಲ್ಲಿ ವಿಸರ್ಜಿಸಲಾಗುತ್ತದೆ. ಕೆಲವರು ಬಸವಣ್ಣನ ಮೂರ್ತಿಗಳನ್ನು ಮುಂದಿನ ಮಣ್ಣೆತ್ತಿನ ಅಮಾವಾಸ್ಯೆವರೆಗೂ ಮನೆಯಲ್ಲಿಟ್ಟು ಪೂಜಿಸುತ್ತಾರೆ.