ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು. ಮೂಲಸೌಕರ್ಯ ಕಲ್ಪಿಸುವುದು ಅವರ ಮೊದಲ ಆದ್ಯತೆ ನೀಡಬೇಕು. ಕೆಲವು ಭ್ರಷ್ಟರ ಜತೆಗೆ ಸೇರಿ ಅಧಿಕಾರಿಗಳು ಭ್ರಷ್ಟರಾಗಬಾರದು ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಅವರು, ಅಭಿವೃದ್ಧಿಗೆ ಪೂರಕವಾಗುವಂತೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಪಟ್ಟಣದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಖಾಸಗಿ ಕಟ್ಟಡಗಳು ತಲೆ ಎತ್ತುತ್ತಿವೆ. ಅಧಿಕಾರಿಗಳು ಮಾತ್ರ ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದೀರಿ. ಅತಿಕ್ರಮಣ ಮಾಡಿದ ಕಟ್ಟಗಳಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕೂಡಲೇ ಎಚ್ಚೆತ್ತು ಅತಿಕ್ರಮಣ ಮಾಡಿದ ಕಟ್ಟಡಗಳ ಮಾಲೀಕರ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಪುರಸಭಾ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದರ ಅವರಿಗೆ ಸೂಚಿಸಿದರು.ಪಟ್ಟಣದಲ್ಲಿ ಲೈಸನ್ಸ್ ಇಲ್ಲದೇ ಮೂರ್ನಾಲ್ಕು ಅಂತಸ್ತಿನ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಇಂತಹ ಕಟ್ಟಡಗಳನ್ನು ಗುರುತಿಸಿ ತಡೆ ಹಿಡಿಯಬೇಕು. ಕಟ್ಟಡ ನಿರ್ಮಾಣದ ನಂತರ ಇವುಗಳನ್ನು ತೆರವುಗೊಳಿಸಲು ಕಷ್ಟವಾಗುತ್ತದೆ. ಹೀಗಾಗಿ ಅಧಿಕಾರಿಗಳು ಮೊದಲ ಹಂತದಲ್ಲಿಯೇ ಅತಿಕ್ರಮಿಸಿ ಕಟ್ಟಲಾಗುತ್ತಿರುವ ಕಟ್ಟಡಗಳನ್ನು ನಿರ್ಮಾಣ ಸಮಯದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳು ತಡೆಹಿಡಿಯಬೇಕು ಎಂದರು.
ನಗರದಲ್ಲಿ ಸರ್ಕಾರಿ ಜಾಗದ ಹೆಸರನಲ್ಲಿ ಖಾಸಗಿ ವ್ಯಕ್ತಿಗಳು ಬಾಡಿಗೆ ಪಡೆಯಲಾಗುತ್ತಿದೆ. ಹುಡ್ಕೋ ಬಡಾವಣೆಯ ಉದ್ಯಾನವನ್ನು ಖಾಸಗಿ ವ್ಯಕ್ತಿಗಳೊಬ್ಬರು ಒತ್ತುವರಿ ಮಾಡಿ ಈ ಜಾಗದಲ್ಲಿ ಹಣ್ಣು, ಹಂಪಲು, ತರಕಾರಿ ವಿವಿಧ ಬೆಳೆಗಳನ್ನು ಬೆಳೆಸಿ ವೈಯಕ್ತಿ ಲಾಭದ ಜತೆಗೆ ಜಾಗವನ್ನು ಎತ್ತಿಹಾಕುವ ಹುನ್ನಾರ ನಡೆಸಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರ ಕೊಟ್ಟರೂ ಅದನ್ನು ತೆರವುಗೊಳಿಸಿ ಪುರಸಭೆ ಅಧುಕಾರಿಗಳು ತಮ್ಮ ಹದ್ದುಬಸ್ತಿನಲ್ಲಿ ಪಡೆದುಕೊಳ್ಳಲು ಮುಂದಾಗಿಲ್ಲ ಎಂದು ಪುರಸಭೆ ಸದಸ್ಯೆ ಸಂಗಮ್ಮ ದೇವರಹಳ್ಳಿ ಆರೋಪಿಸಿದರು.ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದ ಸ್ಮಶಾನದ ಜಾಗದ ಬಗ್ಗೆ ತಪ್ಪು ಮಾಹಿತಿ ನೀಡಿ ಅಕ್ರಮ-ಸಕ್ರಮ ಅಡಿ ಖಾಸಗಿ ವ್ಯಕ್ತಿಯೊಬ್ಬರು ಮಾಲೀಕತ್ವ ವಹಿಸಿದ್ದು ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸಿ ಈ ಜಾಗವನ್ನು ಪುರಸಭೆ ವ್ಯಾಪ್ತಿಗೆ ಹಸ್ತಾಂತರಿಸಬೇಕು ಎಂದು ಸರ್ವಾನುಮತದಿಂದ ಸಮಿತಿ ಶಿಫಾರಸ್ ಮಾಡುತ್ತದೆ ಎಂದು ಶಾಸಕರು ತಿಳಿಸಿದರು.
ಪುರಸಭೆಯು ನೌಕರರು ವಿವಿಧ ವಾರ್ಡ್‌ಗಳಲ್ಲಿ ಕಸವನ್ನು ಗೂಡಿಸುತ್ತಿಲ್ಲ. ಬದಲಿಗೆ ಮನೆಯಲ್ಲಿಯೇ ಕುಳಿತುಕೊಂಡು ತಿಂಗಳ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಕೆಲಸ ಇರದ ಕಡೆ ಪೌರ ಕಾರ್ಮಿಕರನ್ನು ಹಾಕಲಾಗುತ್ತಿದೆ. ಇತ್ತೀಚೆಗೆ ಖುದ್ದಾಗಿ ನಾನೇ ಬ್ಲಾಕ್ ಆದ ಚರಂಡಿಯನ್ನು ಸ್ವಚ್ಛಗೊಳಿಸಿದ್ದೇನೆ ಎಂದು ಪುರಸಭೆ ಸದಸ್ಯ ಮೈಬೂಬಸಾಬ್ ಗೊಳಸಂಗಿ ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ತಹಸೀಲ್ದಾರ್ ಬಲರಾಮ್ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದರ, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪ್ರತಿಭಾ ಅಂಗಡಗೇರಿ, ಪುರಸಭೆ ಸದಸ್ಯರಾದ ಷಹಜಾದಬಿ ಹುಣಸಗಿ, ಸಹನಾ ಬಡಿಗೇರ, ಸಮೀರ್ ದ್ರಾಕ್ಷಿ, ಹಣಮಂತ ಭೋವಿ, ವಿರೇಶ ಹಡಲಗೇರಿ, ರಿಯಾಜ್ಅಹ್ಮದ್ ಢವಳಗಿ, ಚನ್ನಪ್ಪ ಕಂಠಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.ಪಟ್ಟಣದಲ್ಲಿ ಲೈಸನ್ಸ್ ಇಲ್ಲದೇ ಮೂರ್ನಾಲ್ಕು ಅಂತಸ್ತಿನ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಇಂತಹ ಕಟ್ಟಡಗಳನ್ನು ಗುರುತಿಸಿ ತಡೆ ಹಿಡಿಯಬೇಕು. ಕಟ್ಟಡ ನಿರ್ಮಾಣದ ನಂತರ ಇವುಗಳನ್ನು ತೆರವುಗೊಳಿಸಲು ಕಷ್ಟವಾಗುತ್ತದೆ. ಹೀಗಾಗಿ ಅಧಿಕಾರಿಗಳು ಮೊದಲ ಹಂತದಲ್ಲಿಯೇ ಅತಿಕ್ರಮಿಸಿ ಕಟ್ಟಲಾಗುತ್ತಿರುವ ಕಟ್ಟಡಗಳನ್ನು ನಿರ್ಮಾಣ ಸಮಯದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳು ತಡೆಹಿಡಿಯಬೇಕು.
-ಸಿ.ಎಸ್.ನಾಡಗೌಡ (ಅಪ್ಪಾಜಿ), ಶಾಸಕರು.