ಅಧಿಕಾರಿಗಳೇ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Feb 28, 2026, 02:15 AM IST
ಜನತಾ ದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಕಚೇರಿಗಳಿಗೆ ಬರುವ ಸಾರ್ವಜನಿಕರು ಗ್ರಾಹಕರಲ್ಲ. ಅವರು ಪ್ರಭುಗಳಾಗಿದ್ದಾರೆ. ಜನಸೇವೆಯೇ ಜನಾರ್ದನ ಸೇವೆಯಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಇಲಾಖೆಯ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ.

ಗದಗ: ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರೇ ಪ್ರಭುಗಳಾಗಿದ್ದು, ಅವರ ಸೇವೆಗೆ ಅವಕಾಶ ಕಲ್ಪಿಸಲು ಜನತಾ ದರ್ಶನ ಕಾರ್ಯಕ್ರಮವು ಸೂಕ್ತ ವೇದಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಚೇರಿಗಳಿಗೆ ಬರುವ ಸಾರ್ವಜನಿಕರು ಗ್ರಾಹಕರಲ್ಲ. ಅವರು ಪ್ರಭುಗಳಾಗಿದ್ದಾರೆ. ಜನಸೇವೆಯೇ ಜನಾರ್ದನ ಸೇವೆಯಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಇಲಾಖೆಯ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದರು. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಿಂದ ಎಲ್ಲ ಕಡೆಗೆ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಚಿವ ಸಂಪುಟದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ವಿಶೇಷ ಮಹತ್ವವಿದೆ. ಯಾವ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ ದೊರೆಯಲು ಇದು ಸಹಕಾರಿಯಾಗಿದೆ ಎಂದರು.

ಹೊಸ ವ್ಯವಸ್ಥೆ: ಜನತಾ ದರ್ಶನಕ್ಕಿಂತಲೂ 10 ದಿನಗಳ ಮುಂಚೆಯೇ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ವಿವಿಧೆಡೆಯಿಂದ ಬಂದಿರುವ ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಸಾಧ್ಯವಾದರೆ ಎಲ್ಲ ಸಮಸ್ಯೆಗಳಿಗೆ ಸಂಜೆಯೊಳಗೆ ಪರಿಹಾರ ಕಂಡುಕೊಳ್ಳಲಾಗುವುದು. ಎರಡು ದಿವಸಗಳ ಹಿಂದೆ ಬಂದಿರುವ ಅರ್ಜಿಗಳ ಪರಿಹಾರಕ್ಕೆ ಆದಷ್ಟು ಇತ್ಯರ್ಥಪಡಿಸಲಾಗುವುದು ಎಂದರು. 300 ಅರ್ಜಿಗಳ ಸ್ವೀಕೃತಿ: ಜನತಾ ದರ್ಶನದಲ್ಲಿ ಈಗಾಗಲೇ 300ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಂದಾಯ ಇಲಾಖೆಯ 135, ನಗರಾಭಿವೃದ್ಧಿ ಕೋಶದ 38, ಜಿಲ್ಲಾ ಪಂಚಾಯಿತಿಗೆ ಸಂಬಂಧಿತ 4, ವಿವಿಧ ಇಲಾಖೆಗಳ 123 ಅರ್ಜಿಗಳಿವೆ. 188 ಅರ್ಜಿಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಗದಗ ಜಿಲ್ಲೆಯು ಇ ಆಡಳಿತ ವ್ಯವಸ್ಥೆ ಪ್ರಾರಂಭಿಸಿದ ಮೊದಲ ಜಿಲ್ಲೆಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಶೇ. 99.02 ಪ್ರಗತಿ ಸಾಧಿಸಲಾಗಿದೆ.

ವಿಶೇಷ ಆಡಳಿತ: ಹಿಂದಿನ ರಾಜರ ಕಾಲದಲ್ಲಿ ನ್ಯಾಯದ ಗಂಟೆ ಇರುತ್ತಿತ್ತು. ಅದೇ ಕಲ್ಪನೆಯಲ್ಲಿಯೇ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಸಾರ್ವಜನಿಕರ ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತ, ಪೊಲೀಸ ಇಲಾಖೆಯ ಗಮನಕ್ಕೆ ಬಂದು ತ್ವರಿತ ಪರಿಹಾರ ಕಂಡುಕೊಳ್ಳಲು ಅನುವು ಮಾಡಿಕೊಡಲಾಗಿದೆ. ನಾಗರಿಕರಿಗೆ ರಕ್ಷಣೆ ಒದಗಿಸಲು ಪೊಲೀಸಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಥರ್ಡ್ ಐ ಮೂಲಕ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ನಾಗರಿಕರು ಭಯಮುಕ್ತ ವಾತಾವರಣದಲ್ಲಿ ಜೀವನ ನಿರ್ವಹಿಸಬಹುದು. ಸಾರಿಗೆ ಸಂಚಾರದ ನಿಯಮಗಳ ಉಲ್ಲಂಘನೆಗಳು ಕಡಿಮೆಯಾಗಿವೆ ಎಂದು ಸಚಿವರು ಅಧಿಕಾರಿಗಳ ಕಾರ್ಯ ವೈಖರಿಯನ್ನು ಮೆಚ್ಚಿದರು.ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಮಟ್ಟದ ಗ್ಯಾರಂಟಿ ಅಧ್ಯಕ್ಷ ಅಶೋಕ ಮಂದಾಲಿ, ಎಸ್ಪಿ ರೋಹನ್ ಜಗದೀಶ, ಡಿಸಿಎಫ್ ಸಂತೋಷ್ ಕೆ, ಎಡಿಸಿ ಡಾ. ದುರಗೇಶ್ ಕೆ ಆರ್, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಸುಜಾತಾ ದೊಡಮನಿ, ತಹಸೀಲ್ದಾರರು, ತಾಪಂ ಇ‍ಒಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಬೆಟಗೇರಿ ನಗರಸಭೆ ಅಧಿಕಾರಕ್ಕಾಗಿ ಸುಪ್ರೀಂ ಸಮರ!
ಇಂದಿನಿಂದ ಪಿಯುಸಿ ಪರೀಕ್ಷೆ, ಸಕಲ ಸಿದ್ಧತೆ