ಬೀದರ್: ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಪರಿಹರಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಎಲ್ಲ ಅಧಿಕಾರಿಗಳು ಡಿ.25 ರೊಳಗಾಗಿ ಬಾಕಿ ಇರುವ ಎಲ್ಲ ಅಹವಾಲುಗಳನ್ನು ಪರಿಹರಿಸಬೇಕೆಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿ, ವಿವಿಧ ಪೋರ್ಟಲ್‍ಗಳಲ್ಲಿ 80 ಅಹವಾಲುಗಳು ಬಾಕಿ ಇವೆ. ಮಹಿಳಾ ಮಕ್ಕಳ ಇಲಾಖೆಯ 40, ಕಂದಾಯ ಇಲಾಖೆಯ 17, ಪಂಚಾಯತ್‍ರಾಜ್ ಇಲಾಖೆಯ 12, ಕೃಷಿ ಇಲಾಖೆಯ 7, ಕೈಗಾರಿಕಾ ಇಲಾಖೆಯ 12 ಸೇರಿದಂತೆ ಉಳಿದೆಲ್ಲ ಇಲಾಖೆಗಳು ಬಾಕಿ ಇರುವ ಅಹವಾಲುಗಳನ್ನು ಬಗೆಹರಿಸಬೇಕೆಂದು ತಿಳಿಸಿದರು.ಅಧಿಕಾರಿಗಳು ಗ್ರಾಮ, ತಾಲೂಕುಗಳಲ್ಲಿ ಜನಸ್ಪಂದನೆಯ ಉತ್ತಮ ಆಡಳಿತದ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೇಂದ್ರ ಸರ್ಕಾರದ ಆಡಳಿತ ಸುಧಾರಣೆಯ ಇಲಾಖೆ ಪೋರ್ಟಲ್‍ನಲ್ಲಿ ದಾಖಲಿಸಬೇಕೆಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ಅಬಕಾರಿ ಇಲಾಖೆ ಆಯುಕ್ತ ರವಿಶಂಕರ್, ಜಿಲ್ಲಾ ಅಂಕಿ ಸಂಖ್ಯೆ ಯೋಜನಾಧಿಕಾರಿ ಸುವರ್ಣ, ಪಂಚಾಯತ್‌ರಾಜ್ ಇಲಾಖೆ ಇಂಜಿನಿಯರ್ ಶಿವಾಜಿ ಸೇರಿದಂತೆ ಅಧಿಕಾರಿಗಳು ಇದ್ದರು.