ಜೋಳ ಖರೀದಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಲಿ: ಶಾಸಕ ಬಿ.ಎಂ. ನಾಗರಾಜ

KannadaprabhaNewsNetwork |  
Published : Dec 06, 2025, 02:30 AM IST
ಸಿರುಗುಪ್ಪ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಎರಡನೇ ತ್ರೈಮಾಸಿಕ ಸಭೆಯಲ್ಲಿ ಶಾಸಕ ಬಿ ಎಂ ನಾಗರಾಜ್ ಮಾತನಾಡಿದರು. | Kannada Prabha

ಸಾರಾಂಶ

ರೈತರಿಗೆ ಅವಶ್ಯಕ ಇರುವ ಬೀಜಗಳನ್ನು ಪೂರೈಸಬೇಕು.

ಸಿರುಗುಪ್ಪ: ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಬಿ.ಎಂ. ನಾಗರಾಜ ನೇತೃತ್ವದಲ್ಲಿ 2ನೇ ತ್ರೈಮಾಸಿಕ ಸಭೆ ಶುಕ್ರವಾರ ನಡೆಯಿತು.

ಶಾಸಕ ಬಿ.ಎಂ. ನಾಗರಾಜ ಮಾತನಾಡಿ, ರೈತರಿಗೆ ಅವಶ್ಯಕ ಇರುವ ಬೀಜಗಳನ್ನು ಪೂರೈಸಬೇಕು. ಮಣ್ಣೂರು ಭಾಗದಲ್ಲಿ ಬೇರೆ ಬೇರೆ ಕಂಪನಿಯವರು ಬಂದು ಪುಂಡೆ ಬೀಜ ಕೊಟ್ಟು ಬಂದ ಫಸಲನ್ನು ನಾವೇ ಖರೀದಿ ಮಾಡುತ್ತೇವೆ ಎಂದು ರೈತರಿಗೆ ಹೇಳುತ್ತಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆಯದೇ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.

ರೈತರ ಬೇಡಿಕೆಗೆ ಅನುಗುಣವಾಗಿ ಡಿಯಾಚ, ಸೇಣಬು ಬೀಜಗಳನ್ನು ನೀಡಿ, ಪರ್ಯಾಯ ಬೆಳೆಗಳ ಕುರಿತು ಜಾಗೃತಿ ಜಾಥಾಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚು ಪ್ರಚಾರ ಮಾಡುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಹೇಳಿದರು.

ನಮ್ಮ ತಾಲೂಕಿನ ರೈತರಿಗೆ ರೇಷ್ಮೆ ಬೆಳೆಯ ಬಗ್ಗೆ ಜಾಗೃತಿ ಹಾಗೂ ತರಬೇತಿಯನ್ನು ನೀಡುವ ಕಾರ್ಯ ಕೈಗೊಳ್ಳಿ ಎಂದು ತಿಳಿಸಿದರು. ಉತ್ತಮ ಲಾಭವನ್ನು ನೀಡುವ ಹಲವಾರು ಬೆಳೆಗಳಿದ್ದು ನಮ್ಮ ಭಾಗದ ರೈತರು ಭತ್ತದ ಬೆಳೆಯನ್ನೇ ನಂಬಿಕೊಂಡಿದ್ದಾರೆ ಎಂದರು.

ಜೋಳ ಮಾರಾಟಕ್ಕೆ ನೋಂದಣಿ ಒಂದು ಕಡೆ, ಮಾರಾಟ ಮತ್ತೊಂದು ಕಡೆ ಮಾಡುವುದನ್ನು ತಡೆಯಬೇಕು. ಎಲ್ಲಿ ನೋಂದಣಿ ಮಾಡಿತ್ತಾರೋ ಅಲ್ಲಿಯೇ ಮಾರಾಟ ಮಾಡಲು ರೈತರಿಗೆ ತಿಳಿಸಬೇಕು. ಸರ್ಕಾರದ ಗೋದಾಮುಗಳನ್ನು ಬಳಸಿಕೊಂಡು ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಡೆದು, ರೈತರು ಯಾವುದೇ ಪ್ರತಿಭಟನೆ ಮಾಡಲು ಅವಕಾಶ ನೀಡಬಾರದು. ಇಲ್ಲವಾದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗೆ ಶಾಸಕರು ಸೂಚಿಸಿದರು.

ಸೀರಿಗೇರಿ, ತೆಕ್ಕಲಕೋಟೆ ಎಪಿಎಂಸಿ ಪಾಳು ಬಿದ್ದಿದೆ. ಹಚ್ಚೋಳ್ಳಿ ಗೋದಾಮು ನಿರ್ವಹಣೆ ಸರಿಯಾಗಿಲ್ಲ. ಸಿರಿಗೇರಿ ಕ್ರಾಸ್ ನಲ್ಲಿ ಕುರಿ ಮಾರುಕಟ್ಟೆ ಖಾಸಗಿಯವರು ಮಾಡುತ್ತಿದ್ದಾರೆ. ಇದರ ಬದಲಿಗೆ ತೆಕ್ಕಲಕೋಟೆ ಎಪಿಎಂಸಿಯಲ್ಲಿ ಕುರಿ ಮಾರುಕಟ್ಟೆ ಮಾಡಲು ಕ್ರಮಕೈಗೊಳ್ಳಬೇಕು. ತೆಕ್ಕಲಕೋಟೆಯಲ್ಲಿ ನಿರ್ಮಾಣವಾಗಿರುವ ಬಿಸಿಎಂ ವಸತಿ ನಿಲಯ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ರಾರಾವಿ ಗ್ರಾಮದ ಆಸ್ಪತ್ರೆ ಮತ್ತು ಗ್ರಾಪಂ ಮುಂದಿನ ರಸ್ತೆ ಸರಿಪಡಿಸುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚಿಸಿದರು.

₹20 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ವಸತಿಯುತ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ತಯಾರಿ ನಕ್ಷೆ ಮಾಡಿ. ತಾಳೂರು ಮತ್ತು ರಾವಿಹಾಳ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ. ಭೂಮಿ ಇಲ್ಲದವರಿಗೆ ಭೂಮಿ ಹಂಚಿಕೆಯಲ್ಲಿ ಮಾಡುವುದರಲ್ಲಿ ಬಹಳ ಗೋಲ್ ಮಾಲ್ ನಡೆಯುತ್ತಿದೆ. ಇದನ್ನು ತಡೆಯಲು ಅಗತ್ಯ ಕ್ರಮ ವಹಿಸಿ ಎಂದರು.

ಸಿರುಗುಪ್ಪ ಉಪ ವಿಭಾಗದ ಆರಕ್ಷಕ ಉಪನಿರೀಕ್ಷಕ ಮಾಲತೇಶ್ ಕುನಬೆವು, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಾರುತಿ ವರ ಪ್ರಸಾದ್ ರೆಡ್ಡಿ, ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೩೬ನೇ ದಿನದ ಕಾರ್ಖಾನೆ ವಿರೋಧಿ ಹೋರಾಟ, ರಾಜ್ಯ ರೈತ ಸಂಘದಿಂದ ಮೆರವಣಿಗೆ
ಪ್ರತಿ ವಿಷಯದಲ್ಲೂ ವೈಜ್ಞಾನಿಕ ಅಧ್ಯಯನ ಮುಖ್ಯ: ಎಸ್.ವಿ. ಸಂಕನೂರ