ಹಳಿಯಾಳ: ನನ್ನ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳು ನಡೆದರೆ ಅಧಿಕಾರಿಗಳ ಮೇಲೆ ಕ್ರಮ ನಿಶ್ಚಿತ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಖಡಕ್ಕಾಗಿ ಎಚ್ಚರಿಸಿದರು.
ಈ ಅಕ್ರಮ ಚಟುವಟಿಕೆಗಳ ನಿಯಂತ್ರಣ ಮಾಡಲು ಬುಧವಾರ ರಾತ್ರಿಯೇ ಎಲ್ಲ ಪ್ರಮುಖ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದರು. ಕ್ಷೇತ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸೇವೆ ಸಲ್ಲಿಸಬೇಕು, ಒಂದು ವೇಳೆ ಅವರಿಗೆ ಸೇವೆ ಸಲ್ಲಿಸಲು ಆಗದಿದಲ್ಲಿ ಅವರು ಬಯಸುವ ಸ್ಥಳಕ್ಕೆ ಅವರಿಗೆ ವರ್ಗವಾಗಿ ಮಾಡಿಸಿಕೊಡುತ್ತೆನೆ ಎಂದರು.
ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಎಸ್ಪಿಯವರು ಜಿಲ್ಲೆಯಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ಪಿಯವರ ಮನವಿಯಂತೆ ನನ್ನ ಪ್ರದೇಶಾಭಿವೃದ್ಧಿ ನಿಧಿಯಿಂದ ಬೊಲೆರೊ ವಾಹನವನ್ನು ನೀಡುತ್ತಿದ್ದೇನೆ ಎಂದರು. ಎಸ್ಪಿ ಜಿಲ್ಲಾಧಿಕಾರಿ ವರ್ಗಾವಣೆ ಏಕೆ?:ಎಸ್ಪಿ, ಜಿಲ್ಲಾಧಿಕಾರಿಗಳ ವರ್ಗಾವಣೆ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಅದೆಲ್ಲಾ ಮಾಧ್ಯಮಗಳ ಸೃಷ್ಟಿ. ಕಾನೂನಿನಂತೆ ಸೇವೆ ಸಲ್ಲಿಸುವ, ಅಕ್ರಮ ಚಟುವಟಿಕೆಗಳ ಮೇಲೆ ಕಡಿವಾಣ ಹಾಕುವ ಎಸ್ಪಿ ಬೇಡವೆಂದರೆ ಹೇಗೆ? ಮುಖ್ಯಮಂತ್ರಿಗಳು ಯಾವತ್ತೂ ಉತ್ತಮ ಅಧಿಕಾರಿಗಳ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ ಎಂದರು. ತಿರುಪತಿ ಕಾಲ್ತುಳಿತ: ತಿರುಪತಿಯಲ್ಲಿ ಕಾಲ್ತುಳಿತಕ್ಕೆ 6 ಜನರು ಮೃತಪಟ್ಟ ಘಟನೆಯ ಬಗ್ಗೆ ಖೇದ ವ್ಯಕ್ತಪಡಿಸಿದ ದೇಶಪಾಂಡೆ, ಬಹುಶಃ ಈ ಘಟನೆಯು ತಿರುಪತಿಯಲ್ಲಿ ಮೊದಲ ಬಾರಿಗೆ ನಡೆದಿದೆ. ನಾನು ಸಹ ಟಿಡಿಡಿ ಸಮಿತಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಈಗಾಗಲೇ ನಾನು ಟಿಡಿಡಿ ಸಮಿತಿಗೂ ಮತ್ತು ಸರ್ಕಾರಕ್ಕೂ ಪತ್ರವನ್ನು ಬರೆದಿದ್ದೇನೆ. ವೈಕುಂಠ ದ್ವಾರ ದರ್ಶನ ಟಿಕೆಟ್ ಪಡೆಯಲು ಆದ ನೂಕುನುಗ್ಗಲಿನಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಟಿಡಿಡಿ ದೇವಸ್ಥಾನ ಸಮಿತಿಯವರು ಪರಿಹಾರವನ್ನು ನೀಡಬೇಕು. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳ ನಡೆಯದಂತೆ ಆಂಧ್ರಪ್ರದೇಶ ಸರ್ಕಾರ ಮತ್ತು ಟಿಡಿಡಿ ಸೂಕ್ತ ಯೋಜನೆಗಳನ್ನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಹಳಿಯಾಳ ಸಿಪಿಐ ಜಯಪಾಲ ಪಾಟೀಲ, ಪಿಎಸ್‌ಐ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸ್‌ಐ ಕೃಷ್ಣ ಕಲಕೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.