ಅಧಿಕಾರಿಗಳು ಸಮನ್ವಯತೆಯೊಂದಿಗೆ ಕೆಲಸ ಮಾಡಿ-ಶಾಸಕ ಅಶೋಕ್‌ ರೈ

KannadaprabhaNewsNetwork |  
Published : Jun 07, 2026, 02:45 AM IST
ಫೋಟೋ: ೬ಪಿಟಿಆರ್-ಸಭೆ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪ ತಡೆ ಮುನ್ನೆಚ್ಚರಿಕಾ ಸಭೆ ನಡೆಯಿತು. | Kannada Prabha

ಸಾರಾಂಶ

ಮಳೆಗಾಲ ಸಂದರ್ಭ ಪ್ರಕೃತಿ ವಿಕೋಪ ನಿರ್ವಹಣೆಗೆ ಇಲಾಖೆಗಳು ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪುತ್ತೂರು: ಮಳೆಗಾಲ ಸಂದರ್ಭ ಪ್ರಕೃತಿ ವಿಕೋಪ ನಿರ್ವಹಣೆಗೆ ಇಲಾಖೆಗಳು ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶನಿವಾರ ಪುತ್ತೂರು ತಾ.ಪಂ.ಸಭಾಂಗಣದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯ, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು.

ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಮಾಹಿತಿ ನೀಡಿ ಪ್ರಕೃತಿವಿಕೋಪಕ್ಕೆ ಸಂಬಂಧಿಸಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ವಿಎಒ ಮನೆ ಹಾನಿಯ ಮಾಹಿತಿ ಹಾಕಿದ ತತ್ ಕ್ಷಣ ಅದು ಎಂಜಿನಿಯರ್ ಗಳಿಗೆ ತಲುಪಿ ಅವರು ಹಾನಿ ಮೌಲ್ಯ ನಿರ್ಧರಿಸುತ್ತಾರೆ ಎಂದರು.

ಮನೆ ಹಾನಿಗೆ ಮೌಲ್ಯವನ್ನು ನಿರ್ಧರಿಸಿಕೊಂಡು ಪರಿಹಾರ ಮೊತ್ತ ನೀಡಲಾಗುತ್ತದೆ ಎಂದು ತಾಲೂಕು ಕಚೇರಿ ಸಿಬ್ಬಂದಿ ದಯಾನಂದ್ ಸ್ಪಷ್ಟ ಪಡಿಸಿದರು.

ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಮಾಹಿತಿ ನೀಡುತ್ತಾ ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ತಂಡ ರಚಿಸಲಾಗಿದೆ. ಈ ತಂಡಕ್ಕೆ ಪಿಡಿಒಗಳು ಇನ್ಸಿಡೆಂಟ್ ಕಮಾಂಡರ್ ಗಳಾಗಿದ್ದು, ನಗರಸಭೆಯ ಪ್ರತಿ ವಾರ್ಡ್ ಗಳಿಗೆ ನಗರಸಭೆ ಸಿಬ್ಬಂದಿಯನ್ನು ಇನ್ಸಿಡೆಂಟ್ ಕಮಾಂಡರ್ ಗಳನ್ನಾಗಿ ಮಾಡಲಾಗಿದೆ ಎಂದರು.

ಬ್ಯಾರಿಕೇಡ್‌ ಬದಿಗೆ ಸರಿಸುತ್ತೇನೆ: ಹೆದ್ದಾರಿ, ರಸ್ತೆಗಳಿಗೆ ಅಡ್ಡಲಾಗಿಡುವ ಬಹುತೇಕ ಬ್ಯಾರಿಕೇಡ್ ಗಳಿಗೆ ರಿಫ್ಲೆಕ್ಟರ್ ಇಲ್ಲವಾಗಿದ್ದು, ಇದರಿಂದಲೇ ಸಾಕಷ್ಟು ಅಪಘಾತಗಳು ಆಗುತ್ತಿದೆ. ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ಗಳಿಗೆ ರಿಫ್ಲೆಕ್ಟರ್ ಇಲ್ಲದೇ ಇದ್ದರೆ ನಾನೇ ಬ್ಯಾರಿಕೇಡ್ ಗಳನ್ನು ಬದಿಗೆ ಇಡುತ್ತೇನೆ. ರಿಫ್ಲೆಕ್ಟರ್ ಹಾಕುವುದಕ್ಕೆ ನಿಮ್ಮಿಂದ ಸಾಧ್ಯವಾಗದೇ ಇದ್ದಾಗ ನಮ್ಮ ಬಳಿ ತಿಳಿಸಿ ಅದಕ್ಕೆ ಪ್ರಾಯೋಜಕರನ್ನು ಹುಡುಕಿ ರಿಫ್ಲೆಕ್ಟರ್ ಹಾಕುವ ಕಾರ್ಯ ಮಾಡಲಾಗುವುದು ಎಂದು ಶಾಸಕರು ಸೂಚಿಸಿದರು.

24 ಗಂಟೆ ಕಂಟ್ರೋಲ್‌ ರೂಂ : ಮಳೆಗಾಲದ ಸಿದ್ಧತೆಯ ಕುರಿತು ಪುತ್ತೂರು ನಗರಸಭಾ ಪೌರಾಯುಕ್ತೆ ವಿದ್ಯಾ ಕಾಳೆ ಅವರು ಮಾಹಿತಿ ನೀಡಿ, ನಗರಸಭಾ ವ್ಯಾಪ್ತಿಯಲ್ಲಿ ೮ ಕಿ.ಮೀ. ವ್ಯಾಪ್ತಿಯ ರಾಜಕಾಲುವೆ ಇದ್ದು ಅದರ ಹೂಳು ತೆಗೆಯುವುದಕ್ಕೆ ಟೆಂಡರ್ ಕರೆದು ೮೦ ಶೇ.ದಷ್ಟು ಕಾಮಗಾರಿ ಮುಗಿದಿದೆ. ವಿಕೋಪಗಳಿಗೆ ಸಂಬಂಧಿಸಿ ಈ ೦೮೨೪-೬೬೬೬೬೨೭, ೮೨೭೭೨೬೬೫೫೬ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಲೋಕೋಪಯೋಗಿ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿ ಗುತ್ತಿಗೆದಾರರಿಗೆ ಆಗಸ್ಟ್ ವರೆಗೆ ಸಮಯಾವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ರಾಜೇಶ್ ರೈ ತಿಳಿಸಿದರು.

ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಹಾರಾಡಿ ರೈಲ್ವೇ ಸೇತುವೆ ಬಳಿ ಕಾಮಗಾರಿಗೆ ಒಂದು ತಿಂಗಳು ಪೂರ್ತಿ ರಸ್ತೆ ಬಂದ್ ಮಾಡಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ತಿಳಿಸಿದರು. ಎಸಿಯವರ ಅನುಮತಿ ಪಡೆದು ೨೦ ದಿವಸ ಮಾತ್ರ ರಸ್ತೆ ಬಂದ್ ಮಾಡುವಂತೆ ವ್ಯವಸ್ಥೆ ಕೈಗೊಳ್ಳಿ ಎಂದು ಶಾಸಕರು ಇಂಜಿನಿಯರ್‌ಗೆ ಸೂಚನೆ ನೀಡಿದರು.

ವಿದ್ಯುತ್ ಕೈಕೊಟ್ಟರೆ ದುರಸ್ತಿಗೆ ಶೀಘ್ರ ಆಗುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ ಎಂದು ಶಾಸಕರು ತಿಳಿಸಿದಾಗ, ತಂತಿ-ಕಂಬಗಳ ಮೇಲೆ ಬಿದ್ದು ಹಾನಿಯಾದಾಗ ೪೮ ಗಂಟೆಗಳಲ್ಲಿ ದುರಸ್ತಿ ಕಾರ್ಯ ಮಾಡಿಕೊಡುತ್ತೇವೆ. ನಗರ ಭಾಗಗಳಲ್ಲಿ ೨೪ ಗಂಟೆಯೂ ನಮ್ಮ ತಂಡ ಕಾರ್ಯಾಚರಿಸುತ್ತಿರುತ್ತದೆ ಎಂದು ಮೆಸ್ಕಾಂ ಇಂಜಿನಿಯರ್ ರಾಮಚಂದ್ರ ಎ. ತಿಳಿಸಿದರು. ಪುತ್ತೂರಿನ ೧೧೩ ಶಾಲೆಗಳ ಪೈಕಿ ೩೪ ಶಾಲೆಗಳ ಮೇಲ್ಛಾವಣಿ, ಗೋಡೆ ದುರಸ್ತಿ ಕಾರ್ಯ ಬಾಕಿ ಇದೆ. ಅಪಾಯಕಾರಿ ಮರ ಹಾಗೂ ವಿದ್ಯುತ್ ತಂತಿ ತೆರವು ಕಾರ್ಯ ನಡೆದಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮೋನಪ್ಪ ಎಂದು ತಿಳಿಸಿದರು. ಸಾಂಕ್ರಾಮಿಕ ರೋಗ ಜಾಗೃತಿ ಕಾರ್ಯದ ಜತೆಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯಾಧಿಕಾರಿಗಳಾದ ಡಾ.ದೀಪಕ್ ರೈಗೆ ಶಾಸಕರು ಸೂಚಿಸಿದರು.

ವೇದಿಕೆಯಲ್ಲಿ ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಬಂಟ್ವಾಳ ತಹಸೀಲ್ದಾರ್ ಮಂಜುನಾಥ್, ಪುತ್ತೂರು ತಾ.ಪಂ.ಇಒ ಡಾ.ನವೀನ್ ಭಂಡಾರಿ, ಬಂಟ್ವಾಳ ತಾ.ಪಂ.ಇಒ ಸಚಿನ್ ಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಪೈಪ್‌ಲೈನ್‌ ಸಂಪರ್ಕ ಮುಂದಿನ ವರ್ಷ ಪೂರ್ಣ
ಎನ್‌ಎಂಪಿಎಯಲ್ಲಿ ವಿಶ್ವ ಪರಿಸರ ದಿನಾಚರಣೆ