ಮಾಗಡಿ: ತಾಲೂಕಿನ ನೇತೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಉನ್ನತಾಧಿಕಾರಿಗಳು ಭೇಟಿ ನೀಡಿ ಪಶೀಲಿಸಿದ ಬಳಿಕ ಕಾಮಗಾರಿ ಬಿಲ್ ಪಾವತಿಸಬೇಕು ಎಂದು ಗ್ರಾಪಂ ಸದಸ್ಯ ಪುರುಷೋತ್ತಮ್ ಒತ್ತಾಯಿಸಿದರು.
ತಾಲೂಕಿನ ವಿಶ್ವನಾಥಪುರ ಬಳಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಗುಂಡು ತೋಪಿನ ಕಟ್ಟೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4.85 ಲಕ್ಷ ರು. ವೆಚ್ಚದಲ್ಲಿ ವಿಶ್ವನಾಥಪುರ ಗುಂಡು ತೋಪಿನ ಅಭಿವೃದ್ಧಿ ಕಾಮಗಾರಿಯನ್ನು ಜೆಸಿಬಿ ಬಳಕೆ ಸೇರಿ 20 ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಗ್ರಾಪಂ ಸದಸ್ಯ ಪ್ರಕಾಶ್ ಕಾಮಗಾರಿ ಮಾಡಿಸುತ್ತಿದ್ದಾರೆಂದು ಕಾಯಕಬಂಧು ಸುಧಾ ದೂರಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜೆಸಿಬಿ ಯಂತ್ರದಿಂದ ಕಾಮಗಾರಿ ಎಂಎಂಎಸ್ ಹಾಗೂ ಜಿಪಿಎಸ್ ಮಾಡಿದ್ದು, ಸ್ಥಳದಲ್ಲಿ ಜಾಬ್ ಕಾರ್ಡ್ ಹೊಂದಿರುವ ಯಾವುದೇ ಕೂಲಿ ಕಾರ್ಮಿಕರು ಇರಲಿಲ್ಲ. ಈ ಬಗ್ಗೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಅವರನ್ನು ಪ್ರಶ್ನಿಸಿದರೆ ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರೆ ಕೆಲಸ ನಿರ್ವಹಿಸಿದ್ದಾರೆ ಎನ್ನುತ್ತಾರೆ. ಆದರೆ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಆರೋಪಿಸಿದರು.ಗುಂಡು ತೋಪು ಅಭಿವೃದ್ಧಿ ಕಾಮಗಾರಿಯನ್ನು ಜೆಸಿಬಿ ಮೂಲಕ ಮಾಡಿಸಿ, ಸಂಬಂಧಪಡದ ಕೂಲಿ ಕಾರ್ಮಿಕರನ್ನು ಸ್ಥಳದಲ್ಲಿ ನಿಲ್ಲಿಸಿ ಎಂಎಂಎಸ್ ಮಾಡಿಸಿ ಅಕ್ರಮ ಬಿಲ್ ಪಡೆಯುತ್ತಾರೆ. ಇದರಿಂದ ಸರ್ಕಾರದ ಹಣ ದುರುಪಯೋಗವಾಗುತ್ತದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸದಿದ್ದರೆ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಪುರುಷೋತ್ತಮ್ ಎಚ್ಚರಿಸಿದರು.
ಕಾನೂನು ಪ್ರಕಾರ ಜಾಬ್ ಕಾರ್ಡ್ ಹೊಂದಿರುವವರು ಮಾತ್ರ ನರೇಗಾ ಕಾಮಗಾರಿಯನ್ನು ನಿರ್ವಹಿಸಬೇಕು ಎಂದು ಹೇಳುವ ನೇತೇನಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಜೆಸಿಬಿಯಲ್ಲಿ ಕೆರೆ ಹೂಳು ಎತ್ತುವ ಕಾಮಗಾರಿಯ ಬಿಲ್‌ಗೆ ಸಹಿ ಹಾಕಿ ಹಣ ಬಿಡುಗಡೆ ಮಾಡುತ್ತಿದ್ದಾರೆ. ಜೆಸಿಬಿ ಮೂಲಕ ಹೂಳೆತ್ತಿಸುವುದನ್ನು ನಿಲ್ಲಿಸುವಂತೆ ಪಿಡಿಒಗೆ ಅರ್ಜಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಪುರುಷೋತ್ತಮ್ ಬೇಸರ ವ್ಯಕ್ತ ಪಡಿಸಿದರು.ಇಂತಹ ಅನೇಕ ಕಾಮಗಾರಿಗಳ ಬಗ್ಗೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ನಾಲ್ವರು ಸದಸ್ಯರ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ನಾನು ಅಧ್ಯಕ್ಷನಾಗಿದ್ದಾಗ 400ಕ್ಕೂ ಹೆಚ್ಚು ಇ-ಖಾತೆ ಮಾಡಿಸಿಕೊಟ್ಟಿದ್ದೇನೆ. ಈಗ ಒಂದೂ ಖಾತೆ ಮಾಡುತ್ತಿಲ್ಲ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಗ್ರಾಪಂ ಅಧ್ಯಕ್ಷರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಗ್ರಾಪಂ ಸದಸ್ಯರಾದ ನಾವು ಸಭೆ ನಡೆಸಲು ಮುಂದಾದರೆ ಜಾತಿ ನಿಂದನೆ ಕೇಸ್ ದಾಖಲಿಸುತ್ತಾರೆ. ಇದರಿಂದ ಗ್ರಾಪಂ ಒಳಗೆ ತೆರಳಲು ಸದಸ್ಯರು ಹೆದರುವ ಪರಿಸ್ಥಿತಿ ಇದೆ ಎಂದು ಪುರುಷೋತ್ತಮ್ ಹೇಳಿದರು.
ಕೋಟ್.........ವಿಶ್ವಾನಾಥಪುರ ಗುಂಡು ತೋಪಿನ ಕಟ್ಟೆಯಲ್ಲಿ ಹೂಳೆತ್ತುವ ಕಾಮಗಾರಿಯನ್ನು ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರು ಮಾಡಿದ್ದಾರೆ. ಈ ಬಗ್ಗೆ ಇಂಜಿನಿಯಂರ್ ಅಳತೆ ಪುಸ್ತಕದಲ್ಲಿ ನಮೂದಿಸಿದ್ದು, ಅಧ್ಯಕ್ಷರು ಸಹಿ ಹಾಕಿರುವುದರಿಂದ ಬಿಲ್ ಪಾವತಿಸಬೇಕು.
-ಎಸ್.ರಾಕೇಶ್, ನೇತೇನಹಳ್ಳಿ ಪಿಡಿಒ