ಗೂಡಂಗಡಿ ತೆರವು ಕಾರ್ಯಕ್ಕೆ ವಿರೋಧ

KannadaprabhaNewsNetwork |  
Published : Jun 14, 2024, 01:02 AM IST
ಫೋಟೋ : ೧೩ಕೆಎಂಟಿ_ಜೆಯುಎನ್_ಕೆಪಿ೧ : ಪಟ್ಟಣದ ಗಿಬ್ ವೃತ್ತದ ಬಳಿ ಗುರುವಾರ ಗೂಡಂಗಡಿ ತೆರವುಗೊಳಿಸುತ್ತಿರುವುದು | Kannada Prabha

ಸಾರಾಂಶ

ಅಭಿವೃದ್ಧಿಗೆ ನಮ್ಮ ತಕರಾರಿಲ್ಲ. ಆದರೆ ಬಲಾತ್ಕಾರದ ನಡೆ ಸಹಿಸುವುದಿಲ್ಲ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

ಕುಮಟಾ: ಪಟ್ಟಣದ ಗಿಬ್ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರ ಅಂಚಿನ ಗೂಡಂಗಡಿಗಳನ್ನು ಅಧಿಕಾರಿಗಳು ತೆರವು ಕಾರ್ಯಾಚರಣೆ ವೇಳೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ತಡೆದ ಘಟನೆ ಗುರುವಾರ ನಡೆದಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕಾಮಗಾರಿಗೆ ಗೂಡಗಂಡಿಗಳು ಅಡ್ಡಿಯಾಗಿವೆ ಎಂಬ ಹಿನ್ನೆಲೆ ಐಆರ್‌ಬಿ ಕಂಪನಿ ಕಾಮಗಾರಿ ನಡೆಸಲು ಮುಂದಾಗಿದೆ. ಬಹಳ ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ಈ ಕಾಮಗಾರಿಯಿಂದ ಸಾರ್ವಜನಿಕರು ದಿನನಿತ್ಯ ಸಂಕಟ ಪಡುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಆಡಳಿತ ವ್ಯವಸ್ಥೆ ಲೋಕಸಭೆ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಗುಟ್ಟಾಗಿ ಗೂಡಂಗಡಿ ತೆರವಿಗೆ ನಿರ್ಧರಿಸಿ, ಯಾವ ಮಾಹಿತಿಯನ್ನೂ ನೀಡದೇ ಹಠಾತ್ ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕರ ವಿರೋಧಕ್ಕೆ ಕಾರಣವಾಯಿತು. ಮಧ್ಯಾಹ್ನ ಪೊಲೀಸ್ ಬಲದೊಂದಿಗೆ ಜೆಸಿಬಿ ಯಂತ್ರ ಸಹಿತ ಬಂದ ಪುರಸಭೆ ಹಾಗೂ ಐಆರ್‌ಬಿ ಅಧಿಕಾರಿಗಳು ಗಿಬ್ ವೃತ್ತದ ವ್ಯಾಯಾಮ ಶಾಲೆ ಪಕ್ಕದ ನಾಲ್ಕೈದು ಗೂಡಂಗಡಿಗಳನ್ನು ತೆರವುಗೊಳಿಸತೊಡಗಿದರು.

ಈ ವೇಳೆ ಸಾರ್ವಜನಿಕರೊಂದಿಗೆ ಅಧಿಕಾರಿಗಳ ಮಾತಿನ ಚಕಮಕಿ ನಡೆದು ಕನಿಷ್ಠ ಮಾಹಿತಿಯನ್ನೂ ನೀಡದೇ ತೆರವು ಕಾರ್ಯಾಚರಣೆ ನಡೆಸುತ್ತಿರುವುದು ಅನ್ಯಾಯದ ಪರಮಾವಧಿ. ಐಆರ್‌ಬಿಯವರು ಪಟ್ಟಣ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಅರೆಬರೆ ಕೆಲಸ ಮಾಡಿ ವರ್ಷಗಳೇ ಆದರೂ ತಿರುಗಿ ನೋಡುವುದಿಲ್ಲ. ಜನ ಏನೂ ಮಾಡಲಾಗದೇ ಕೋರ್ಟಿನ ಮೊರೆ ಹೋಗುತ್ತಿದ್ದಾರೆ. ಅಭಿವೃದ್ಧಿಗೆ ನಮ್ಮ ತಕರಾರಿಲ್ಲ. ಆದರೆ ಬಲಾತ್ಕಾರದ ನಡೆ ಸಹಿಸುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಈ ನಡುವೆ ಸ್ಥಳಕ್ಕಾಗಮಿಸಿದ ಜೆಡಿಎಸ್‌ನ ಸೂರಜ ನಾಯ್ಕ ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಮತ್ತು ಐಆರ್‌ಬಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೂ ದೂರವಾಣಿಯಲ್ಲಿ ಮಾತನಾಡಿದ ಸೂರಜ ನಾಯ್ಕ, ಜೀವನೋಪಾಯಕ್ಕೆ ಗೂಡಂಗಡಿ ನಡೆಸುತ್ತಿರುವವರ ಮೇಲೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯನ್ನು ಅಧಿಕಾರಿಗಳು ತೋರಬೇಕು. ಯಾವ ಮಾಹಿತಿಯನ್ನೂ ನೀಡದೇ ತೆರವುಗೊಳಿಸುವುದು ಅನ್ಯಾಯ. ಪಟ್ಟಣದ ಒಂದು ತುದಿಯಿಂದ ಹೆದ್ದಾರಿಯಂಚಿನ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿ ಅಲ್ಲಿಂದ ಕಾಮಗಾರಿಯನ್ನು ಆರಂಭಿಸಿ, ಇನ್ನೊಂದು ತುದಿಗೆ ಸಮಯಮಿತಿಯಲ್ಲಿ ಪ್ರಾಮಾಣಿಕವಾಗಿ ಪೂರ್ಣಗೊಳಿಸುವ ದಕ್ಷತೆಯನ್ನು ಇಲಾಖೆ ಪ್ರದರ್ಶಿಸಬೇಕು. ಗೂಡಂಗಡಿಕಾರರ ಸಂಕಟಕ್ಕೆ ಪರಿಹಾರ ಕ್ರಮಗಳಾಗಬೇಕು ಎಂದರು.

ತಹಸೀಲ್ದಾರ್ ಪ್ರವೀಣ ಕರಾಂಡೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ ಅಂಚಿನ ಅತಿಕ್ರಮಣಗಳನ್ನು ತೆರವುಗೊಳಿಸುವುದಕ್ಕೆ ಸುಪ್ರೀಂಕೋರ್ಟಿನ ಆದೇಶವೇ ಇದೆ. ಇಂದಲ್ಲ ನಾಳೆ ಈ ಎಲ್ಲ ಗೂಡಂಗಡಿಗಳನ್ನು ತೆಗೆಯಲೇ ಬೇಕು. ನಮ್ಮದೇ ಪಟ್ಟಣ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗೆ ಜನರ ಸಹಕಾರ ಬೇಕು ಎಂದರು. ಆದರೆ ಗೂಡಂಗಡಿಗಳ ತುರ್ತು ತೆರವಿಗೆ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಇತರ ಸಂಬಂಧಪಟ್ಟ ಅಧಿಕಾರಿಗಳ ಜತೆ ಗೂಡಂಗಡಿಕಾರರ ಮತ್ತು ಪ್ರಮುಖರ ಸಭೆ ಏರ್ಪಡಿಸುವಂತೆ ಒತ್ತಾಯಿಸಿದರು. ಸಾಕಷ್ಟು ಜನ ವಿರೋಧದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗೂಡಂಗಡಿ ತೆರವು ಕಾರ್ಯಾಚರಣೆ ಬಂದ್ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ