ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೊತ್ಸವ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಗುಣಮಟ್ಟದ ಬೋಧನಾ ಕಾರ್ಯ, ಅತ್ಯುನ್ನತ ಸಂಶೋಧನಾ ಚಟುವಟಿಕೆ ಮತ್ತು ಸಾಮಾಜಿಕ ಆರೋಗ್ಯ ಸೇವೆ ವಿಷಯಗಳಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಫಲಿತಾಂಶ ದೊರೆತಿದೆ ಎಂದರು.
ಥೈಲ್ಯಾಂಡ್ ನ ಬ್ಯಾಂಕಾಂಕ್ ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಸಂಸ್ಥೆಗೆ ಪ್ರಶಸ್ತಿ ಘೋಷಿಸಲಾಗಿದೆ. 2024ರ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಬಹುಮುಖ್ಯವಾದ ಗುರಿಯಾದ ಉತ್ತಮ ಆರೋಗ್ಯ ಮತ್ತು ಕ್ಷೇಮ ವಿಷಯದಲ್ಲಿ ಪ್ರಪಂಚದ ಮೊದಲನೇ ಸ್ಥಾನ ಲಭಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಈ ಪ್ರಶಸ್ತಿಗಾಗಿ 115 ದೇಶಗಳಿಂದ 497 ವಿಶ್ವ ವಿದ್ಯಾನಿಲಯಗಳು ಭಾಗವಹಿಸಿದ್ದವು. ಭಾರತದಿಂದ ಸುಮಾರು 115 ವಿವಿಗಳು ಪಾಲ್ಗೊಂಡಿದ್ದು, ಇದರಲ್ಲಿ ಕರ್ನಾಟದಿಂದ 12 ವಿವಿಗಳು ಭಾಗವಹಿಸಿದ್ದವು. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 9 ವಿಭಾಗದಲ್ಲಿ ಜೆಎಸ್ಎಸ್ ಸಂಸ್ಥೆ ಸ್ಪರ್ಧೆ ಮಾಡಿತ್ತು. ಅದರಲ್ಲಿ 7 ವಿಭಾಗದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
2008ರಲ್ಲಿ ಆರಂಭವಾದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಆರೋಗ್ಯಕರ ಶಿಕ್ಷಣ ಮತ್ತು ಸಂಶೋಧನೆಯನ್ನು ವರ್ಧನೆಗೊಳಿಸುವ ನಿಟ್ಟಿನಲ್ಲಿ ನಿರಂತರ ಸಮರ್ಪಣಾ ಮನೋಭಾವವನ್ನು ಹೊಂದಿದೆ. ಇದರೊಂದಿಗೆ ಆರೋಗ್ಯ ವಿಷಯದಲ್ಲಿ ಹೊಸ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಇಲ್ಲಿವರೆಗೂ ಕಾಪಾಡಿಕೊಂಡು ಬಂದಿರುವ ಬದ್ಧತೆಯಿಂದ ಇಂತಹ ಪ್ರಶಸ್ತಿಗಳು ಲಭ್ಯವಾಗಿವೆ. ಸಂಸ್ಥೆಯು ಇನ್ನೂ ಮುಂದೆಯೂ ಅತ್ಯುತ್ತಮ ಮಟ್ಟದಲ್ಲಿ ತನ್ನ ಕಾರ್ಯಕ್ಷಮೆತೆಯನ್ನು ಕಾಪಾಡಿಕೊಂಡು ಮುನ್ನಡೆಯಲು ಪ್ರಯತ್ನಿಸುತ್ತದೆ ಎಂದರು.
ಜೆಎಸ್ಎಸ್ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಡಾ.ಬಿ. ಸುರೇಶ್, ಕುಲಪತಿ ಡಾ. ಸುರೀಂದರ್ ಸಿಂಗ್ ಅನ್ ಲೈನ್ ಮೂಲಕ ಮಾತನಾಡಿದರು. ಕುಲಸಚಿವ ಡಾ.ಬಿ. ಮಂಜುನಾಥ್, ಜೆಎಸ್ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಬಸವನಗೌಡಪ್ಪ, ಜೆಎಸ್ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಪಿ. ಮಧು ಇದ್ದರು.
ಮೈಸೂರು ತಾಲೂಕು ವರುಣ ಬಳಿ ನಿರ್ಮಾಣವಾಗುತ್ತಿರುವ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕ್ಯಾಂಪಸ್ 2027ಕ್ಕೆ ಕಾರ್ಯಾರಂಭ ಆಗಲಿದೆ. ಈ ಕ್ಯಾಂಪಸ್ ಜಾಗತಿಕ ಮಟ್ಟವನ್ನು ಹೊಂದಿರುತ್ತದೆ. ಸುಮಾರು 15 ಸಾವಿರ ವಿದ್ಯಾರ್ಥಿಗಳು, 2 ಸಾವಿರ ಬೋಧಕ ವರ್ಗ ಮತ್ತು 4 ಸಾವಿರ ಸಂಶೋಧನಾ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ ಎಂದು ಕುಲಪತಿ ಡಾ. ಸುರೀಂದರ್ ಸಿಂಗ್ ತಿಳಿಸಿದರು.
ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಂದ ಮುಂಬರುವ ದಿನಗಳಲ್ಲಿ ಸಮಾಜ ಹಾಗೂ ವಿಶ್ವಕ್ಕೆ ಅಗತ್ಯ ಎನಿಸುವ ಸೇವಾ ಶ್ರಮಿಸುವ ಮುಂದಿನ ಪಿಳೀಗೆಯನ್ನು ಉತ್ತೇಜಿಸಲಾಗುತ್ತದೆ. ಜ್ಞಾನವು ಭರವಸೆಯ ದಾರಿ ದೀಪವಾಗಿ ಕಾರ್ಯ ನಿರ್ವಹಿಸುವ ಕಡೆ ಮಾನವೀಯತೆಯು ಸಮೃದ್ಧಿ ಮತ್ತು ಸಾಮರಸ್ಯದ ಮಾರ್ಗದರ್ಶನ ಮಾಡಲು ಸಹಕಾರಿಯಾಗುತ್ತದೆ.