ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಶೂನ್ಯಕ್ಕೆ ಇಳಿಸಿ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರು ಕಲಿಕಾರ್ಥಿ ಕಲ್ಯಾಣ ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು.ಕೇಂದ್ರದಲ್ಲಿ ಗುರುವಾರ ಮಾರ್ಗದರ್ಶಿ-25, ವಿದ್ಯಾರ್ಥಿ- ಅಧಿಕಾರಿ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪ್ರವೇಶಾತಿ, ಅಂಕಪಟ್ಟಿ, ನೈಜ ಪ್ರಮಾಣಪತ್ರ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿರುತ್ತವೆ. ಅವರು ಕರೆ ಮಾಡಿದಾಗ ಮಾಹಿತಿ ಒದಗಿಸುವುದು ಸವಾಲಿನ ಕೆಲಸ ಎಂದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಕಲಿಕಾರ್ಥಿ ಕಲ್ಯಾಣ ಕೇಂದ್ರ ತೆರೆದು, ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಾನು ದೇಶದ ಬೇರೆ ಬೇರೆ ಮುಕ್ತ ವಿವಿಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಕೂಡ ಈ ರೀತಿಯ ಸೌಲಭ್ಯಗಳಿಲ್ಲ. ಇದನ್ನು ಸಿಬ್ಬಂದಿ ಸದುಪಯೋಗ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಸಮಸ್ಯೆಗಳೇ ಇಲ್ಲದಂತೆ ಕಾರ್ಯನಿರ್ವಹಿಸಬೇಕು ಎಂದರು.ನಮ್ಮ ವಿವಿಯು ಬೀದರ್ನಿಂದ ಚಾಮರಾಜನಗರದವರೆಗೆ ಇಡೀ ರಾಜ್ಯವ್ಯಾಪಿ ಕಾರ್ಯಕ್ಷೇತ್ರ ಹೊಂದಿದೆ. ದೂರದೂರಿನಿಂದ ವಿದ್ಯಾರ್ಥಿಗಳು ಕೇಂದ್ರ ಸ್ಥಾನಕ್ಕೆ ಬರಬೇಕಾದರೆ ಮೂರ್ನಾಲ್ಕು ದಿನಗಳು ಬೇಕಾಗುತ್ತದೆ. ಇದನ್ನು ತಪ್ಪಿಸಲೆಂದೆ ಈ ಕೇಂದ್ರ ಆರಂಭಿಸಲಾಗಿದೆ ಎಂದರು.
ವಿಶ್ವವಿದ್ಯಾನಿಲಯದ ವಿಷಯ ಎಂದಾಗ ಎಲ್ಲಾ ನೌಕರರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯಾವುದೇ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ವಿವಿಯು ಪ್ರಗತಿಪಥದಲ್ಲಿ ಸಾಗಬೇಕು ಎಂದು ಅವರು ಕರೆ ನೀಡಿದರು.ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮಾತನಾಡಿ, ಕಲಿಕಾರ್ಥಿ ಕಲ್ಯಾಣ ಕೇಂದ್ರದ ಸಿಬ್ಬಂದಿ ತುಂಬಾ ಸಕ್ರಿಯವಾಗಿ ಕೆಲಸ ಮಾಡಬೇಕು. ಇದೊಂದು ಸಂವಹನ ಪ್ರಕ್ರಿಯೆ. ಆದ್ದರಿಂದ ವಿದ್ಯಾರ್ಥಿಗಳಿಂದ ಬರುವ ಪ್ರತಿಯೊಂದು ಕರೆಯನ್ನು ಸ್ವೀಕರಿಸಬೇಕು. ಕರೆ ಕಡಿತವಾದರೆ, ಮಿಸ್ಡ್ ಕಾಲ್ ಇದ್ದರೆ ಮರು ಕರೆ ಮಾಡಬೇಕು. ಅತ್ಯಂತ ತಾಳ್ಮೆಯಿಂದ ಉತ್ತರಿಸಬೇಕು ಎಂದು ಸಲಹೆ ಮಾಡಿದರು.
ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆ, ಸಿದ್ಧಪಾಠ, ಪ್ರವೇಶ, ಆಂತರಿಕ ಅಂಕಗಳು ಮತ್ತಿತರ ಮಾಹಿತಿ ಕೇಳುತ್ತಾರೆ. ಡಿಜಿಟಲ್ ಲರ್ನಿಂಗ್ ಆಪ್ ಬಗ್ಗೆ ಕೂಡ ಕೇಳುತ್ತಾರೆ. ವಿದ್ಯಾರ್ಥಿಗಳಿಗೆ ಆತಂಕ ಇರುತ್ತದೆ. ಅದನ್ನು ಹೋಗಲಾಡಿಸುವಂತೆ ನೀವು ಉತ್ತರಿಸಬೇಕು. ಸಂಬಂಧಪಟ್ಟವರಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ನೀಡಬೇಕು ಎಂದರು.ಕೇಂದ್ರ ಈವರೆಗಿನ ಸಾಧನೆ ಸಮಾಧಾನಕರವಾಗಿದ್ದು, ಇಷ್ಟಕ್ಕೇ ನಾವು ತೃಪ್ತಿಪಡಬಾರದು. ಅತ್ಯುತ್ಯಮ ಎನಿಸಿಕೊಳ್ಳಲು ವಿದ್ಯಾರ್ಥಿ- ಅಧಿಕಾರಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.ಯ
ಅಧ್ಯಯನ ಕೇಂದ್ರಗಳ ಡೀನ್ ಪ್ರೊ.ರಾಮನಾಥ್ ನಾಯ್ಡು ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಮಾಹಿತಿ ಕೇಳಿದರೂ ಒದಗಿಸಿ ಎಂದರು.ಪರೀಕ್ಷಾ ವಿಭಾಗದ ಉಪ ಕುಲಸಚಿವ ಸತೀಶ್ ಮಾತನಾಡಿ, ಚುನಾವಣೆ ಮತ್ತಿತರ ತುರ್ತು ಸಂದರ್ಭದಲ್ಲಿ ಮಾತ್ರ ಪರೀಕ್ಷೆಗಳು ವಿಳಂಬವಾಗುತ್ತವೆ. ಇದನ್ನು ಹೊರತುಪಡಿಸಿದರೆ ಎಲ್ಲವೂ ವೇಳಾಪಟ್ಟಿಯಂತೆಯೇ ನಡೆಯುತ್ತವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇದೊಂದು ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮ. ಮೊದಲೆಲ್ಲಾ ಮುಕ್ತ ವಿವಿಯ ಬಗ್ಗೆ ವಿಶೇಷವಾಗಿ ಸಿದ್ಧಪಾಠಗಳು ತಲುಪಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿದ್ದವು. ಆದರೆ ಈಗ ಅವೆಲ್ಲಾ ಕಡಿಮೆಯಾಗಿವೆ ಎಂದರು.ಕೇಂದ್ರದ ಸಂಯೋಜಕ ಡಾ.ಸುಧಾಕರ ಹೊಸಳ್ಳಿ ಪ್ರಾಸ್ತಾವಿಕ ಭಾಷಣ ಮಾಡಿ, ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ, ನಿವಾರಣೆ ಮಾಡುತ್ತಿದೆ. ಪ್ರವೇಶಾತಿ ಪೂರ್ವ ಸಮಾಲೋಚನೆ, ಶೈಕ್ಷಣಿಕ ಸಮಾಲೋಚನೆ, ಪರೀಕ್ಷಾ ವಿಭಾಗಕ್ಕೆ ಸಂಬಂಧಿಸಿದ ಮಾಹಿತಿ ನೀಡುತ್ತಿದೆ. ದೂರವಾಣಿ, ಇ-ಮೇಲ್, ಖುದ್ದು ಬರುವವರಿಗೂ ಕೂಡ ಮಾಹಿತಿ ನೀಡಲಾಗುತ್ತಿದೆ. ಈ ರೀತಿಯ ವ್ಯವಸ್ಥೆ ನಮ್ಮಲ್ಲಿ ಹೊರತುಪಡಿಸಿ ಇತರೆಡೆ ಇಲ್ಲ ಎಂದರು.
ನೇತ್ರಾವತಿ ಪ್ರಾರ್ಥಿಸಿದರು. ಅಧೀಕ್ಷಕಿ ಎಂ.ಎಚ್. ಕೋಮಲಾ ಸ್ವಾಗತಿಸಿದರು. ರೂಪಾ ವಂದಿಸಿದರು. ಕುಲಪತಿಗಳ ವಿಶೇಷಾಧಿಕಾರಿ ಮಹದೇವ್, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಎಂಬಿಎ ವಿಭಾಗದ ಪ್ರೊ.ಮಹದೇವಸ್ವಾಮಿ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿ, ಸಿಬ್ಬಂದಿ ಇದ್ದರು.