ಹುಬ್ಬಳ್ಳಿ:
ಕುಂದಗೋಳ ತಾಲೂಕಿನಲ್ಲಿ ಜೆಜೆಎಂ ಹಾಗೂ ಎಲ್ ಆ್ಯಂಡ್ ಟಿ ಕಂಪನಿಯವರು ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾರ್ವಜನಿಕರು ಬೇಸತ್ತು, ಇವರ ವಿರುದ್ಧ ಹಲವು ದೂರು ಸಲ್ಲಿಸುತ್ತಿದ್ದಾರೆ. ಎಲ್ ಆ್ಯಂಡ್ ಟಿ ಕಂಪನಿ ಗ್ರಾಮೀಣ ಭಾಗದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಅಗೆದು ಹಾಗೆಯೇ ಬಿಟ್ಟಿದೆ. ಕಳೆದ 5-6 ಸಭೆಗೆ ಹಾಜರಾಗದೇ ನಿರ್ಲಕ್ಷ್ಯ ತೋರಿದ್ದಾರೆ. ಸಭೆಗೆ ಗೈರಾಗುವ ಮೂಲಕ ಅಗೌರವ ತೋರುವ ಅಧಿಕಾರಿಗಳು ಯಾರೇ ಇದ್ದರೂ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.
ಮುಂಜಾಗೃತಾ ಕ್ರಮಕ್ಕೆ ಸೂಚನೆ:ಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಮಲೇರಿಯಾ ಹಾಗೂ ಡೆಂಘೀ ಪ್ರಕರಣ ಕಂಡುಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಮಳೆ ನೀರು ಹಾಗೂ ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತಿಂಗಳಿಗೆ ಕನಿಷ್ಠ 2 ಬಾರಿಯಾದರೂ ಔಷಧಿ ಸಿಂಪರಣೆ ಮಾಡಿಸಬೇಕು ಎಂದು ಸೂಚಿಸಿದರು.
ಕುಂದಗೋಳ ತಾಲೂಕಿನಾದ್ಯಂತ ಈಗಾಗಲೇ ಬಿತ್ತನೆ ಪ್ರಕ್ರಿಯೆ ಆರಂಭವಾಗಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಪ್ರಮಾಣದ ಬೀಜ-ಗೊಬ್ಬರಗಳ ದಾಸ್ತಾನು ಸಂಗ್ರಹವಿದೆ. ಬಿತ್ತನೆ ಪ್ರಕ್ರಿಯೆ ಮುಗಿಯುವ ವರೆಗೂ ಕೊರತೆ ಆಗದಂತೆ ಎಚ್ಚರವಹಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಹುಬ್ಬಳ್ಳಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಆರ್.ಎಸ್. ಉಪ್ಪಾರ ಮಾತನಾಡಿ, 2024-25ನೇ ಸಾಲಿನ ವಿವಿಧ ಯೋಜನೆಯ ಅಡಿ ಅರಣ್ಯೀಕರಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹಿರೇಹರಕುಣಿಯಿಂದ ಶಿಶುನಾಳ, ಯರಗುಪ್ಪಯಿಂದ ಶಿರಗುಪ್ಪ, ಕುಸುಗಲ್‌ನಿಂದ ಕಿರೇಸೂರ, ನೆಲವಡಿಯಿಂದ ಮಣಕವಾಡ ಸೇರಿದಂತೆ ಶಹರ ಪ್ರದೇಶದಲ್ಲಿಯೂ ವಿವಿಧ ಜಾತಿಯ ಸಾವಿರಾರು ಸಸಿ ನೆಡುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.
ರೈತರಿಗೆ ಉತ್ತಮ ಬಿತ್ತನೆ ಬೀಜ ದೊರೆಯದೆ ಬಿತ್ತಿದ ಬಳಿಕ ಹಾಳಾದಾಗ ಪುನಃ ಖರೀದಿಸಲು ಮುಂದಾಗುತ್ತಾರೆ. ಆದರೆ, ಎಫ್ಐಡಿ ಮೂಲಕ ಈ ಮೊದಲೇ ಬಿತ್ತನೆ ಬೀಜ ಖರೀದಿಸಿದ್ದರಿಂದ ಮರಳಿ ಬೀಜ ಖರೀದಿಸಲು ಬರುವುದಿಲ್ಲ. ಹೀಗಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಜತೆ ಮಾತನಾಡಿ ಈ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ ಎಂದು ಶಾಸಕ ಎಂ.ಆರ್. ಪಾಟೀಲ್ ಹೇಳಿದರು.