ನೂತನ ತಾಂತ್ರಿಕತೆಗಳ ಅಳವಡಿಕೆಯಿಂದ ಹೆಚ್ಚಿನ ಇಳುವರಿ: ಡಾ.ಬಿ.ಎಸ್. ಚಂದ್ರಶೇಖರ್

KannadaprabhaNewsNetwork |  
Published : Jun 14, 2024, 01:01 AM IST
31 | Kannada Prabha

ಸಾರಾಂಶ

ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಲ್ಲಿ ಈಗಾಗಲೇ ಮುಂಗಾರಿನ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಭತ್ತ, ರಾಗಿ, ಮುಸುಕಿನಜೋಳ ಜಿಲ್ಲೆಯ ಬಹು ಮುಖ್ಯ ಬೆಳೆಗಳಾಗಿವೆ. ಈ ನಿಟ್ಟಿನಲ್ಲಿ ಕೃಷಿ ವಿವಿ ಅಭಿವೃದ್ಧಿಪಡಿಸಿರುವ ನೂತನ ತಳಿಗಳು ಹಾಗೂ ವೈಜ್ಞಾನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದು ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಲು ಈ ಕಾರ್ಯಕ್ರಮವು ನೆರವಾಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್. ಚಂದ್ರಶೇಖರ್ ತಿಳಿಸಿದರು.

ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ರಾಷ್ಟ್ರೀಯ ಬೀಜ ಪ್ರಾಯೋಜನೆ ಸಂಯುಕ್ತವಾಗಿ ಮೈಸೂರಿನ ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮುಂಗಾರು ಪೂರ್ವ ತಾಂತ್ರಿಕ ಆಂದೋಲನ- 2024 ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ತಾಲೂಕುಗಲ್ಲಿ ಈಗಾಗಲೇ ಮುಂಗಾರಿನ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಭತ್ತ, ರಾಗಿ, ಮುಸುಕಿನಜೋಳ ಜಿಲ್ಲೆಯ ಬಹು ಮುಖ್ಯ ಬೆಳೆಗಳಾಗಿವೆ. ಈ ನಿಟ್ಟಿನಲ್ಲಿ ಕೃಷಿ ವಿವಿ ಅಭಿವೃದ್ಧಿಪಡಿಸಿರುವ ನೂತನ ತಳಿಗಳು ಹಾಗೂ ವೈಜ್ಞಾನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದು ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಲು ಈ ಕಾರ್ಯಕ್ರಮವು ನೆರವಾಗಲಿದೆ ಎಂದರು.

ಇಂದು ಕೃಷಿ ಕಾರ್ಮಿಕರು ಕೃಷಿ ಚಟುವಟಿಕೆಗಳಿಗೆ ಸಿಗುವುದು ಬಹಳ ವಿರಳವಾಗಿರುವುದಂದ ಕೃಷಿ ಯಂತ್ರೋಪಕರಣಗಳ ಮಾಹಿತಿಯನ್ನು ರೈತರು ಅರಿತುಕೊಂಡರೆ ದೇಶದ ಆರ್ಥಿಕ ಪ್ರಗತಿಗೆ ಸಹಕರಿಸಬಹುದು ಎಂದರು.

ಜಿಕೆವಿಕೆ ವಿಶೇಷಾಧಿಕಾರಿ ಡಾ.ಕೆ. ಮಧುಸೂದನ್ ಮಾತನಾಡಿ, ಕೃಷಿ ವಿವಿ ದಕ್ಷಿಣ ಒಣ ವಲಯಕ್ಕಾಗಿ ಅಭಿವೃದ್ಧಿಪಡಿಸಿರುವ ಸಾಮೆ ಜಿಪಿಯುಎಲ್ 11, ಬರಗು ಜಿಪಿಯುಪಿ 32, ಸೂರ್ಯಕಾಂತಿ ಕೆಬಿಎಸ್ಎಚ್ 85, ಎಚ್ಎ-5 ಅವರೆ, ಕೆಎಂಪಿ 220, ಕೆಆರ್ಎಚ್ 4 ಭತ್ತದ ತಳಿಗಳು, ಎಂಎಎಚ್ 14-135 ಮುಸುಕಿನ ಜೋಳ, ಅಲಸಂದೆ ಕೆಬಿಸಿ- 12 ನೂತನ ತಳಿಗಳ ವಿಶೇಷತೆಯನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಸಿ.ರಾಮಚಂದ್ರ ಮಾತನಾಡಿ, ಮುಂಗಾರು ಹಂಗಾಮಿಗೆ ಸೂಕ್ತವಾದ ತಂತ್ರಜ್ಞಾನಗಳು ಮತ್ತು ಕೃಷಿ ಪರಿಕರಗಳ ಪ್ರದರ್ಶನ ಮತ್ತು ರಾಷ್ಟ್ರೀಯ ಬೀಜ ಯೋಜನೆಯಲ್ಲಿ ಲಭ್ಯವಿರುವ ಬಿತ್ತನೆ ಬೀಜಗಳ ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇಂದಿನ ಆದ್ಯತೆ ವಿಷಯಗಳಾದ ಸಮಗ್ರ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ನೀರಿನ ಸದ್ಬಳಕೆ, ನಿಖರ ಕೃಷಿ ಹಾಗೂ ಯಾಂತ್ರಿಕರಣಗಳಿಗೆ ಹೆಚ್ಚು ಒತ್ತು ನೀಡಬೇಕು. ಭತ್ತದಲ್ಲಿ ಬೀಜೋಪಚಾರ, ಜೈವಿಕ ಗೊಬ್ಬರ ಬಳಕೆ, ಹಸಿರೆಲೆ ಗೊಬ್ಬರಗಳ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ಓಡಿಪಿ ನಿರ್ದೇಶಕ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಪ್ರಗತಿಪರ ರೈತ ಬನ್ನಿಕುಪ್ಪೆಯ ಲೋಕೇಶ್, ಕೃಷಿ ವಿವಿ ಸಂಶೋಧನಾ ನಿರ್ದೇಶನಾಲಯದ ತಾಂತ್ರಿಕ ಅಧಿಕಾರಿ ಡಾ.ಸಿ.ಉಮಾಶಂಕರ್, ಶಶಿರೇಖಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯ ತಾಲೂಕು ಸಂಯೋಜನಾಧಿಕಾರಿ ರಾಕೇಶ್, ಓಡಿಪಿ ಸಂಸ್ಥೆಯ ಎಫ್.ಪಿ.ಓ ಸಂಯೋಜಕ ಜಾನ್ ರಾಡ್ರಿಗ್ರಸ್, ವಿಸ್ತರಣಾ ಶಿಕ್ಷಣ ಘಟಕದ ಕ್ಷೇತ್ರ ಸಹಾಯಕರಾದ ಆಸಿಫ್ ಪಾಷಾ, ಧರಣೇಶ್, ಸಂದೇಶ್ ಇದ್ದರು.

ತಾಂತ್ರಿಕ ಅಧಿವೇಶನ- ವಸ್ತುಪ್ರದರ್ಶನ

ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಸಹ ಸಂಶೋಧಕ ಡಾ.ಜಿ.ವಿ. ಸುಮಂತ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ರಾಹುಲ್ ದಾಸ್, ಡಾ.ಆರ್.ಎನ್.ಪುಷ್ಪಾ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.

ವಸ್ತುಪ್ರದರ್ಶನ ಮಳಿಗೆಗಳಲ್ಲಿ ಕೃಷಿ ವಿವಿ ಶಿಫಾರಸುಗೊಂಡ ನೂತನ ತಾಂತ್ರಿಕತೆಗಳು ಹಾಗೂ ತಳಿಗಳ ಮಾಹಿತಿಯನ್ನು ಚಾರ್ಟ್ ಗಳನ್ನು ಅಳವಡಿಸಲಾಗಿತ್ತು. ಅಲ್ಲದೆ, ರಾಷ್ಟ್ರೀಯ ಬೀಜ ಪ್ರಾಯೋಜನೆ ವತಿಯಿಂದ ರೈತರಿಗಾಗಿ ಕೃಷಿ ವಿವಿ ನೂತನ ತಳಿಗಳಾದ ಕೆಎಂಪಿ-220, ಕೆಆರ್ ಎಚ್ 4 ಹಾಗೂ ಆರ್ ಎನ್ಆರ್- 15048 ಭತ್ತದ ತಳಿಗಳು, ಕೆಎಂಆರ್ 630 ಹಾಗೂ 365 ರಾಗಿ ತಳಿಗಳು, ಎಚ್ಎ-5 ಅವರೆ ತಳಿ ಬಿತ್ತನೆ ಬೀಜದ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಒಟ್ಟು 222 ರೈತರು, ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿತ್ತನೆ ಬೀಜಗಳನ್ನು ಖರೀದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ