ಕಲಾಭವನ ದುರಸ್ತಿ ಮತ್ತು ಕಡಪಾ ಮೈದಾನ ಬಳಕೆಗೆ ಸಂಬಂಧಿಸಿದತೆ ತಮ್ಮ ಸಮಿತಿಯಿಂದ ತಜ್ಞರ ಸಮಿತಿ ಒಂದನ್ನು ಶೀಘ್ರವಾಗಿ ರಚಿಸಿದಲ್ಲಿ ಆ ಸಮಿತಿ ಸೂಚಿಸಿದಂತೆ ಕಲಾಭವನವನ್ನು ಸಾರ್ವಜನಿಕರ ಬಳಕೆಗೆ ಸಜ್ಜುಗೊಳಿಸಲಾಗುವುದು.
ಧಾರವಾಡ:
ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನವನ್ನು ತುರ್ತಾಗಿ ಸಾರ್ವಜನಿಕರ ಬಳಕೆಗೆ ತೆರೆಯುವಂತೆ ಕ್ರಮಕೈಕೊಳ್ಳಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಭರವಸೆ ನೀಡಿದ್ದಾರೆ.ಕಲಾಭವನ ಹಾಗೂ ಕಡಪಾ ಮೈದಾನ ಉಳಿಸಿ ಹೋರಾಟ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಾತನಾಡಿದ ಅವರು, ಕಲಾಭವನ ದುರಸ್ತಿ ಮತ್ತು ಕಡಪಾ ಮೈದಾನ ಬಳಕೆಗೆ ಸಂಬಂಧಿಸಿದತೆ ತಮ್ಮ ಸಮಿತಿಯಿಂದ ತಜ್ಞರ ಸಮಿತಿ ಒಂದನ್ನು ಶೀಘ್ರವಾಗಿ ರಚಿಸಿದಲ್ಲಿ ಆ ಸಮಿತಿ ಸೂಚಿಸಿದಂತೆ ಕಲಾಭವನವನ್ನು ಸಾರ್ವಜನಿಕರ ಬಳಕೆಗೆ ಸಜ್ಜುಗೊಳಿಸಲಾಗುವುದು. ತಕ್ಷಣದಿಂದ ದುರಸ್ತಿ ಕಾರ್ಯ ಸ್ಥಗಿತಗೊಳಿಸಲು ಸೂಚಿಸಿದ್ದು ನಿರ್ಮಿತಿ ಕೇಂದ್ರವು ತಜ್ಞರ ನೀಡುವ ಸಲಹೆಯಂತೆ ಕಾರ್ಯ ಮಾಡಲು ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಪದ್ಮಶ್ರೀ ಪುರಸ್ಕೃತ ಪಂ. ಎಂ. ವೆಂಕಟೇಶಕುಮಾರ ಮಾತನಾಡಿ, ಕಲಾಭವನಕ್ಕೆ ಬಹುದೊಡ್ಡ ಇತಿಹಾಸವಿದೆ. ರಾಷ್ಟ್ರಮಟ್ಟದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದವು. ಅಂಥ ವೈಭವ ಮತ್ತೆ ಕಲಾಭವನದಲ್ಲಿ ಮರುಕಳಿಸುವಂತಾಗಬೇಕು ಎಂದರು.ಡಾ. ವೀರಣ್ಣ ರಾಜೂರ ಮಾತನಾಡಿ, ಕಲಾಭವನ ಮತ್ತು ಕಡಪಾ ಮೈದಾನ ಧಾರವಾಡದ ಅಸ್ಮಿತೆ. ಸಾರ್ವಜನಿಕ ಏನೇ ಚಟುವಟಿಕೆ, ಹೋರಾಟ, ಭಾಷಣ ನಡೆಸಬೇಕೆಂದರೆ ಕಡಪಾ ಮೈದಾನದಲ್ಲಿ ನಡೆಯುತ್ತಿದ್ದವು. ಅದಕ್ಕೆ ಧಕ್ಕೆ ಬರದಂತೆ ಸೌಂದರ್ಯಿಕರಣ ನಡೆಯಬೇಕು. ಕಲಾವಿದರಿಗೆ ಕೈಗೆಟುಕುವ ದರದಲ್ಲಿ ಕಲಾಭವನ ದೊರೆಯುವಂತಾಗಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿದರು. ಸಭೆಯಲ್ಲಿ ಸತೀಶ ತುರಮರಿ, ಡಾ. ಪ್ರಕಾಶ ಗರುಡ, ಬಿ. ಮಾರುತಿ, ಎಂ.ಎಂ. ಚಿಕ್ಕಮಠ, ಬಿ.ಐ. ಇಳಿಗೇರ, ಡಾ. ರಾಜೇಂದ್ರ ಪೊದ್ಧಾರ, ಡಾ. ರಾಮು ಮೂಲಗಿ, ಎಫ್.ವಿ. ಚಿಕ್ಕಮಠ, ಡಾ. ಬಿ.ಎಚ್. ಕುರಿ, ಲಕ್ಷ್ಮಣ, ಎಚ್.ಜಿ. ದೇಸಾಯಿ, ಲಕ್ಮಣ ಬಕ್ಕಾಯಿ, ಸುರೇಶ ಬೇದರೆ, ಎ.ಎಂ. ಖಾನ್, ಬಿ.ಎನ್. ಪೂಜಾರಿ ಇದ್ದರು.