ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಹಸೀಲ್ದಾರ್ ಮಂಜುಳಾ ನೇತೃತ್ವದಲ್ಲಿ ಕರೆಯಲಾಗಿದ್ದ ರೈತ ಮುಖಂಡರ ಕುಂದುಕೊರತೆ ನಿವಾರಣೆ ಸಭೆಯಲ್ಲಿ ತಾಲೂಕಿನ ರೈತರ ಸಮಸ್ಯೆಗಳನ್ನು ಒಂದೊಂದಾಗಿ ತೆರೆದಿಟ್ಟು, ಆಡಳಿತ ವ್ಯವಸ್ಥೆಯ ನೈಜ ಪರಿಚಯ ಮಾಡಿಸಿದರು.
ಸಭೆಯಲ್ಲಿ ಮಾತನಾಡಿದ ಮುಖಂಡ ಅಣಗಳ್ಳಿ ಬಸವರಾಜು, ಬೆಳೆ ವಿಮೆ ಕಂಪನಿಗಳು ರೈತರಿಗೆ ವಂಚನೆ ಮಾಡುತ್ತಿವೆ, ಬೆಳೆ ವಿಮೆಯಲ್ಲಿನ ಲೋಪ ಸರ್ಕಾರದ ಗಮನಕ್ಕೆ ತಂದು ಚರ್ಚಿಸಿ ರೈತರಿಗೆ ವರದಾಯಕ ದೃಷ್ಟಿಯಲ್ಲಿ ಗಮನಹರಿಸಬೇಕು. ರೈತರಿಗೆ ಬೆಳೆ ನಷ್ಟಕ್ಕೆ ವಿತರಿಸಲಾದ ಪರಿಹಾರ ಹಾಗೂ ನೀಡದ ಮೊತ್ತದ ಕುರಿತು ಮಾಹಿತಿ ನೀಡಿ ಎಂದರು.ಇದಕ್ಕೆ ಪ್ರತಿಕ್ರಿಯಿಸಲು ಅಧಿಕಾರಿಗಳು ತಡಕಾಡಿದ್ದರಿಂದ ಬಸವರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ತಹಸೀಲ್ದಾರ್ ಮಂಜುಳಾ, ಕೃಷಿ ಇಲಾಖೆಯ ಅಧಿಕಾರಿ ಸುಂದ್ರಮ್ಮ, ಬರಪರಿಹಾರ ವಿತರಣೆ ಸಂಬಂಧಿಸಿದ ಮಾಹಿತಿ ಪೋರ್ಟನಲ್ಲಿದೆ. ಡಾಟಾ ಎಂಟ್ರಿಯಾಗುತ್ತಿದೆ. ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಾಕಲಾಗುವುದು, ತಾಲೂಕಿಗೆ 24.53 ಲಕ್ಷ ರು. ಪರಿಹಾರ ಬಿಡುಗಡೆಯಾಗಿದೆ. ಶೀಘ್ರ ವಿತರಣೆಯಾಗಲಿದೆ ಎಂದು ಮಾಹಿತಿ ನೀಡಿದರು.ವಿಶೇಷ ಪ್ರಕರಣ: ಸಭೆಯಲ್ಲಿ ರೈತ ಸಂಘದ ಜಿಲ್ಲಾ ಮುಖಂಡ ಶೈಲೇಂದ್ರ ಮಾತನಾಡಿ, ಇತ್ತೀಚೆಗೆ ಕುಂತೂರು ಬಳಿ ಬೈಕ್ ಸವಾರ ರೇವಣ್ಣ ಎಂಬ ಯುವಕನಿಗೆ ನವಿಲು ಅಡ್ಡ ಬಂದ ಪರಿಣಾಮ ಆತ ಹಾಗೂ ನವಿಲು ಸ್ಥಳದಲ್ಲಿಯೇ ಮೖತಪಟ್ಟಿದೆ. ಒಂದು ವೇಳೆ ಯುವಕ ಬದುಕಿ ನವಿಲು ಮೃತಪಟ್ಟಿದ್ದರೆ, ಆತನ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಮೖತ ರೇವಣ್ಣ ಕುಟುಂಬಕ್ಕೆ 15ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಅರಣ್ಯಾಧಿಕಾರಿ ಭರತ್ ಮಾತನಾಡಿ, ಇದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದರು.
ರೈತ ಮುಖಂಡರಾದ ಶಿವರಾಮ್, ವಿರುಪಾಕ್ಷ, ಮಹದೇವಪ್ಪ ಇನ್ನಿತರರು ಮಾತನಾಡಿ, ಕೆಎಸ್‍ಆರ್‌ಟಿಸಿ ಬಸ್ ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿಲ್ಲ, ಮುಳ್ಳೂರು ಮಾರ್ಗ, ಸತ್ತೇಗಾಲದಿಂದ ಉಗನೀಯ ಪಾಳ್ಯ ಮಾರ್ಗವಾಗಿ ಸಂಚರಿಸುವ ಜನರು ಸಮಸ್ಯೆಪಡುವಂತಾಗಿದೆ. ಬಸ್‍ಗಳು ಗ್ರಾಮದೊಳಗೆ ಬಾರದೆ ಬೈಪಾಸ್ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಒಂದು ಬಸ್‍ನಲ್ಲಿ 120 ಜನರು ಸಂಚರಿಸುವ ಪರಿಸ್ಥಿತಿ ಇದೆ. ಬಸ್ ನಿಲ್ದಾಣದಲ್ಲಿ ಬಸ್‍ಗಳ ಸಂಚಾರ ಮಾರ್ಗ ನಾಮಫಲಕ ಅಳವಡಿಸುತ್ತಿಲ್ಲ. ಖಾಸಗಿ ಬಸ್‍ಗಳ ಜತೆ ಹೊಂದಾಣಿಕೆ ಮಾಡಿಕೊಂಡು ಬಸ್‍ಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರು, ಮಹದೇಶ್ವರ ಬೆಟ್ಟ, ಚಾಮರಾಜನಗರ, ಮೈಸೂರು ಜನರಿಗೆ ಹೋಗುವ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬಸ್ ಕೊರತೆ ಇರುವುದರಿಂದ ಈ ಸಮಸ್ಯೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.