ಕೂಡ್ಲಿಗಿ: ತಾಲೂಕಿನ ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿದ ವಿಜಯನಗರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ವಿ. ಮಂಜುನಾಥ ಅಲ್ಲಿನ ಸಮಸ್ಯೆ ಆಲಿಸಿದರು. ಬಳಿಕ ಉಪನ್ಯಾಸಕರ ಕೊರತೆ, ಮೂಲಭೂತ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದರು.
ಇಬ್ಬರು ಉಪನ್ಯಾಸಕರ ಆಗಮನ:
ವಸತಿ ಶಾಲೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಿಗೆ 2 ತಿಂಗಳಿಗೂ ಹೆಚ್ಚು ಕಾಲ ಉಪನ್ಯಾಸಕರು ಇರಲಿಲ್ಲ. ಅತಿಥಿ ಉಪನ್ಯಾಸಕರು ಇದ್ದರೂ ಸರಿಯಾಗಿ ಬರುತ್ತಿರಲಿಲ್ಲ. ಪಾಠ ಮಾಡುವುದು ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿರಲಿಲ್ಲ ಎಂಬುದು ವಿದ್ಯಾರ್ಥಿಗಳ ದೂರಾಗಿತ್ತು. ಉಪನ್ಯಾಸಕರನ್ನು ಬೇರೆ ಶಾಲೆಯಿಂದ ಡೆಪ್ಯೂಟೇಶನ್ ಮೇಲೆ ಕರೆಸಿ ಪಾಠ ಮಾಡಿಸಿದರು.ಊಟದ ಬಗ್ಗೆ ತಕರಾರು ತೆಗೆಯದ ವಿದ್ಯಾರ್ಥಿಗಳು:
ಗುಣಮಟ್ಟದ ಆಹಾರ ನಿರಂತರ ನೀಡಲಾಗುತ್ತಿದೆ. ಗ್ರೈಂಡರ್ ರಿಪೇರಿ ಇದ್ದ ಕಾರಣ ದೋಸೆ ಮಾತ್ರ ಮೆನು ಪ್ರಕಾರ ನೀಡಿಲ್ಲ. ಉಳಿದಂತೆ ಮೆನು ಪ್ರಕಾರ ನೀಡುತ್ತಿದ್ದಾರೆ ಎಂದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಮಾಜ ಕಲ್ಯಾಧಿಕಾರಿಗಳಿಗೆ ವಿದ್ಯಾರ್ಥಿಗಳು ಮುಕ್ತಮನಸ್ಸಿನಿಂದ ತಿಳಿಸಿದರು.24 ಗಂಟೆಯೊಳಗೆ ಯುಪಿಎಸ್ ಬ್ಯಾಟರಿ ವ್ಯವಸ್ಥೆ:
ವಸತಿಶಾಲೆ ಮಕ್ಕಳು ವಿದ್ಯುತ್ ಇಲ್ಲದಿದ್ದಾಗ ಕತ್ತಲಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು 24 ತಾಸಿನೊಳಗೆ ಯುಪಿಎಸ್ ಸರಿಪಡಿಸಲಾಗುವುದು. ವಿದ್ಯುತ್ ಇಲ್ಲದಿದ್ದರೂ ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಪ್ರಾಂಶುಪಾಲ, ಸಿಬ್ಬಂದಿಗೆ ಡ್ರಿಲ್:
ವಸತಿ ಶಾಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಪರಿಹರಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಾಂಶುಪಾಲರು, ಡಿ ಗ್ರೂಪ್ ನೌಕರರಿಗೆ ಎಚ್ಚರಿಸಿದ್ದಾರೆ. ಶೌಚಾಲಯಗಳನ್ನು ಸದಾ ಸುಸ್ಥಿತಿಯಲ್ಲಿಡಬೇಕೆಂದು ಕಿವಿಮಾತು ಹೇಳಿದ್ದಾರೆ.ವಿದ್ಯಾರ್ಥಿಗಳ ಸಂತಸ:
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ನೀಗಿವೆ. ಉಪನ್ಯಾಸಕರನ್ನು ಸಹ ಡೆಪ್ಯುಟೇಶನ್ ಮೇಲೆ ನಿಯೋಜಿಸಿದ್ದರಿಂದ ಕನ್ನಡಪ್ರಭ ಕಾಳಜಿಗೆ ಇಲ್ಲಿಯ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.