ಮೆಂದಾರೆ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

KannadaprabhaNewsNetwork | Published : Apr 28, 2024 1:28 AM

ಸಾರಾಂಶ

ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮತ ಚಲಾವಣೆ ಮಾಡಲು ಹೋಗಿದ್ದ ಆದಿವಾಸಿ ಜನಾಂಗದ ಮೇಲೆ ಇಂಡಿಗನತ್ತ ಗ್ರಾಮಸ್ಥರು ಹಲ್ಲೆ ಮಾಡಿದ್ದ ಹಿನ್ನೆಲೆ ಗಾಯಗೊಂಡಿದ್ದ ಮೆಂದಾರೆ ಗ್ರಾಮದ ಜನರನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ಮಾಡಿ ಧೈರ್ಯ ತುಂಬಿದರು.

ಹನೂರು: ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮತ ಚಲಾವಣೆ ಮಾಡಲು ಹೋಗಿದ್ದ ಆದಿವಾಸಿ ಜನಾಂಗದ ಮೇಲೆ ಇಂಡಿಗನತ್ತ ಗ್ರಾಮಸ್ಥರು ಹಲ್ಲೆ ಮಾಡಿದ್ದ ಹಿನ್ನೆಲೆ ಗಾಯಗೊಂಡಿದ್ದ ಮೆಂದಾರೆ ಗ್ರಾಮದ ಜನರನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ಮಾಡಿ ಧೈರ್ಯ ತುಂಬಿದರು.

ಮೆಂದಾರೆ ಗ್ರಾಮದಲ್ಲಿ ಸುಮಾರು 60 ಕುಟುಂಬಗಳಿದ್ದು 80 ಮತದಾರರಲ್ಲಿದ್ದು ಸುಮಾರು 180 ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ ಇರುವ ಎಲ್ಲರೂ ಸಹ ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಏ. 26ರಂದು ನಡೆದ ಲೋಕಸಭಾ ಚುನಾವಣೆಗೆ ಇಂಡಿಗನತ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು, ಆದರೆ ಅಧಿಕಾರಿಗಳು ಮೆಂದರೆ ಗ್ರಾಮದವರನ್ನು ಮನವೊಲಿಸಿ ಮತಗಟ್ಟೆಗೆ ಕರೆ ತಂದಾಗ ಇಂಡಿಗನತ್ತ ಗ್ರಾಮಸ್ಥರು ಹಲ್ಲೆ ಮಾಡಿದ್ದರು.

ಹಲ್ಲೆಯಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಶುಕ್ರವಾರ ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ನೇತೃತ್ವದ ತಂಡ ಗ್ರಾಮದಲ್ಲಿ ಗಾಯಗೊಂಡಿದ್ದ ಎಲ್ಲರಿಗೂ ಚಿಕಿತ್ಸೆ ನೀಡಿದ್ದಾರೆ.

ಮೆಂದಾರೆ ಗ್ರಾಮಕ್ಕೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಮಠದ ಹಾಗೂ ಎಎಸ್ಪಿ ಉದೇಶ್‌ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಈ ವೇಳೆ ಎಎಸ್‌ಪಿ ಉದೇಶ್ ಮಾತನಾಡಿ, ಗ್ರಾಮದ ಯಾರೊಬ್ಬರು ಭಯಪಡುವುದು ಬೇಡ ನಿಮ್ಮ ರಕ್ಷಣೆಗೆ ನಾವಿದ್ದೇವೆ. ನೀವು ಗ್ರಾಮದಲ್ಲಿಯೇ ಧೈರ್ಯದಿಂದ ಇರಿ ಏನಾದರೂ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಭರವಸೆ ನೀಡಿದರು.

ಇದೆ ವೇಳೆ ಗ್ರಾಮಸ್ಥರು ಮಾತನಾಡಿ, ಮೆಂದಾರೆ ಗ್ರಾಮದಲ್ಲಿರುವ ನಾವೆಲ್ಲರೂ ಒಳ್ಳೆಯ ನಿವೇಶನ, ಜಮೀನು ನೀಡಿದರೆ ನಾವು ಅಲ್ಲಿಗೆ ಬರುತ್ತೇವೆ, ನಮ್ಮನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ನೀವು ತಮ್ಮ ಮನವಿಯನ್ನು ನೀಡಿದರೆ ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಗಾಯಗೊಂಡವರಿಂದಲೂ ದೂರು: ತಮ್ಮ ಮತದಾರರ ಹಕ್ಕನ್ನು ಚಲಾಯಿಸಲು ಹೋಗಿದ್ದ ಮೆಂದಾರೆ ಗ್ರಾಮದ ನಿವಾಸಿಗಳ ಮೇಲೆ ಹಲ್ಲೆ ಮಾಡಿರುವ ಇಂಡಿಗನತ್ತ ಗ್ರಾಮಸ್ಥರ ವಿರುದ್ಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶನಿವಾರ ಪಿಡಿಒ ಕಿರಣ್ ಹಾಗೂ ನೀರು ಗಂಟೆಗಳು ಪೈಪ್ಲೈನ್ ದುರಸ್ತಿಪಡಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಗ್ರಾಮಕ್ಕೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದರು.

Share this article