ಪಿಒಪಿ ಗಣಪತಿ ಮೂರ್ತಿ ಮಾಡದಂತೆ ಅಧಿಕಾರಿಗಳ ಎಚ್ಚರಿಕೆ

KannadaprabhaNewsNetwork |  
Published : Aug 14, 2025, 01:00 AM IST
ರಾಣಿಬೆನ್ನೂರಿನ ಮಾರುತಿ ನಗರದ ಗಣಪತಿ ಮೂರ್ತಿ ಮಾರಾಟ ಸ್ಥಳಕ್ಕೆ ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ ಭೇಟಿ ನೀಡಿ ಪರಿಶೀಲಿಸಿದರು. ಪರಿಸರ ಇಲಾಖೆ ಅಧಿಕಾರಿಗಳು ಇದ್ದರು. | Kannada Prabha

ಸಾರಾಂಶ

ನಗರದ ಕುರುಬಗೇರಿ, ಮಾರುತಿ ನಗರ, ಸಿದ್ದೇಶ್ವರ ನಗರ, ದೊಡ್ಡಪೇಟೆ, ಕೋಟೆ, ವಾಗೀಶ ನಗರ ಸೇರಿದಂತೆ ಅನೇಕ ಕಡೆ ಗಣಪತಿ ಮಾಡುವ ಕಲಾವಿದರ ಮನೆ ಹಾಗೂ ಮಳಿಗೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಣಿಬೆನ್ನೂರು: ಗಣೇಶ ಚತುರ್ಥಿ ಹಿನ್ನೆಲೆ ಪಿಒಪಿ ಗಣಪತಿ ಮೂರ್ತಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನೇತೃತ್ವದ ತಂಡ ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.ನಗರದ ಕುರುಬಗೇರಿ, ಮಾರುತಿ ನಗರ, ಸಿದ್ದೇಶ್ವರ ನಗರ, ದೊಡ್ಡಪೇಟೆ, ಕೋಟೆ, ವಾಗೀಶ ನಗರ ಸೇರಿದಂತೆ ಅನೇಕ ಕಡೆ ಗಣಪತಿ ಮಾಡುವ ಕಲಾವಿದರ ಮನೆ ಹಾಗೂ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ, ನಗರದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ಗಣಪತಿ ಮಾರಾಟ ಮಾಡುವಂತಿಲ್ಲ. ಸದ್ಯ ಸ್ಥಳೀಯ ಕಲಾವಿದರು ಪಿಒಪಿ ಗಣಪತಿ ಮೂರ್ತಿ ಮಾಡುತ್ತಿಲ್ಲ. ಮಣ್ಣಿನ ಗಣಪತಿ ಮಾಡುತ್ತಿದ್ದಾರೆ. ರಾಸಾಯನಿಕ ಬಣ್ಣಗಳನ್ನು ಬಳಸದಂತೆ ಮೂರ್ತಿ ತಯಾರಕರಿಗೆ ತಿಳಿಸಲಾಗಿದೆ. ಪಿಒಪಿ(ಪ್ಲಾಸ್ಟರ್ ಆಪ್ ಪ್ಯಾರಿಸ್) ಗಣೇಶ ವಿಗ್ರಹ ತಯಾರಿಸಿ ಮಾರಾಟ ಮಾಡುವುದರಿಂದ ಪ್ರಕೃತಿಗೆ ಅತೀವ ನಷ್ಟವುಂಟಾಗಲಿದ್ದು, ವಿಸರ್ಜನೆಗೊಳಿಸಿದಾಗ ನೀರು ಕಲುಷಿತಗೊಳ್ಳುವುದಲ್ಲದೆ, ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಾರಾಟಗಾರರು ಮಾರಾಟ ಮಾಡಿದರೆ ಕಾನೂನು ಪ್ರಕಾರ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.ಹಬ್ಬ ಸಮೀಪಿಸಿದ ಸಮಯದಲ್ಲಿ ಗಣಪತಿ ಮೂರ್ತಿ ಮಾರಾಟ ಮಾಡುವ ಮಳಿಗೆದಾರರು ಯಾವುದೇ ಕಾರಣಕ್ಕೂ ಪಿಒಪಿ ಗಣಪತಿ ಮೂರ್ತಿ ತರಿಸುವಂತಿಲ್ಲ. ಅವರಿಗೆ ಪರವಾನಗಿ ಕೊಡುವ ಮುಂಚೆಯೆ ಪಿಒಪಿ ಮಾರಾಟ ಮಾಡುವುದಿಲ್ಲವೆಂದು ಪ್ರಮಾಣಪತ್ರ ಬರೆಯಿಸಿಕೊಳ್ಳುತ್ತೇವೆ. ಒಂದು ವೇಳೆ ಸರ್ಕಾರದ ನಿಯಮ ಮೀರಿ ಪಿಒಪಿ ಗಣಪತಿ ಮಾರಾಟ ಮಾಡಿದರೆ ಅಂಥವರ ಪರವಾನಗಿ ರದ್ದು ಪಡಿಸುವ ಜತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಲೋಹಿತ್ ಕುಮಾರ, ಸಹಾಯಕ ಅಧಿಕಾರಿ ಪಿ.ಜೆ., ಶಿವಾನಂದ ದೊಡ್ಡಮನಿ, ನಗರಸಭೆ ಪರಿಸರ ಇಲಾಖೆ ಆರೋಗ್ಯ ನಿರೀಕ್ಷಕರಾದ ಮಧುರಾಜ ಕಂಬಳಿ, ರಾಘವೇಂದ್ರ ಗಾವಡೆ, ಪವನ ಬಡಿಗೇರ, ಕರ್ನಾಟಕ ವಾಯು ಮಾಲಿನ್ಯ ತಡೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರು ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!